ಮೀರತ್: ನಿರ್ದೇಶಿಸಿ ನಾಯಕನಾಗಿ ನಟಿಸಿರುವ ರಾಜ್ ಬಿ ಶೆಟ್ಟಿಯ ‘ಒಂದು ಮೊಟ್ಟೆಯ ಕಥೆ’ ಚಿತ್ರವನ್ನು ಎಲ್ಲರೂ ನೋಡಿರಬೇಕು. ಚಿತ್ರದಲ್ಲಿ ತಲೆ ಮೇಲೆ ಕೂದಲಿಲ್ಲದ ನಾಯಕನಿಗೆ ಮದುವೆಯಾಗುವ ಚಿಂತೆಯನ್ನು ನಾವು ಕಾಣಬಹುದು. ಆದ್ರೆ ಈ ಕಥೆ ‘ಒಂದು ಮೊಟ್ಟೆಯ ಕಥೆ’ಯ ಮುಂದುವರಿದ ಭಾಗದಂತಿದೆ.
ಹೌದು, ಪತಿ ವಿಗ್ ಹಾಕುವ ಮೂಲಕ ಮೋಸ ಮಾಡಿದ್ದರಿಂದ ಮಹಿಳೆಯೊಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಗಂಡ ಮತ್ತು ಆತನ ಕುಟುಂಬಸ್ಥರು ನನಗೆ ಮೋಸ ಮಾಡಿ ಮದುವೆ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮದುವೆ: ಈ ಘಟನೆ ಪೊಲೀಸ್ ಠಾಣೆಯ ಮೆಟ್ಟೇರಿದ್ದು, ಮಹಿಳೆಗೆ ಕೌನ್ಸಿಲಿಂಗ್ ಮಾಡಲಾಗಿದೆ. ಕೌನ್ಸಿಲಿಂಗ್ನಲ್ಲಿ ಮಹಿಳೆ ನೀಡಿದ ಮಾಹಿತಿ ಪ್ರಕಾರ, 2020 ರ ಜನವರಿಯಲ್ಲಿ ಗಾಜಿಯಾಬಾದ್‌ನ ಯುವಕನನ್ನು ಮದುವೆಯಾಗಿದ್ದೆ. ಮದುವೆ ಸಮಯದಲ್ಲಿ ನನ್ನ ಪತಿಯ ತಲೆ ಮೇಲೆ ದಪ್ಪನಾಗಿ ಮತ್ತು ಕಪ್ಪಾಗಿ ಕೂದಲು ಇತ್ತು. ಹೀಗಾಗಿ ಅವರು ತಲೆಯಲ್ಲಿ ಕೂದಲಿಲ್ಲ ಎಂಬುದು ತಿಳಿದಿರಲಿಲ್ಲ ಅಂತಾ ಮಹಿಳೆ ಹೇಳಿದ್ದಾರೆ.
ಮೋಸ: ಮದುವೆಯ ದಿನದಂದು ಯುವಕನಿಗೆ ವಿಗ್ ಹಾಕಿ ಅಂದಗೊಳಿಸಿದ್ದರು. ಈ ಸಂಗತಿ ಮದುವೆಯಾಗಿ ಒಂದು ವರ್ಷದ ನಂತರ ಬೆಳಕಿಗೆ ಬಂದಿದೆ. ಹೀಗಾಗಿ ವಿವಾಹಿತ ಮಹಿಳೆ ತನ್ನ ಗಂಡನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದು, ಬೋಳು ಗಂಡನಿಂದ ವಿಚ್ಛೇದನ ಪಡೆಯಲು ತೀರ್ಮಾನಿಸಿದ್ದಾರೆ.
ಕೌನ್ಸಿಲಿಂಗ್: ಕೌನ್ಸ್ಲಿಂಗ್ ವೇಳೆ, ವಿವಾಹಿತ ಮಹಿಳೆ ಬೋಳು ಗಂಡನೊಂದಿಗೆ ಬದುಕಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಪತಿ ಬೋಳು ಎಂಬ ಸುದ್ದಿ ತಿಳಿದಾಗಿನಿಂದಲೂ ಗಂಡನನ್ನು ದ್ವೇಷಿಸಲು ಪ್ರಾರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ನಿರ್ಧಾರ ಅಚಲ: ವಿವಾಹಿತ ಮಹಿಳೆ ವಿಚ್ಛೇದನ ಪಡೆಯುವ ಬಗ್ಗೆ ಅಚಲವಾಗಿದ್ದಾರೆ. ಕೌನ್ಸಿಲಿಂಗ್ ವೇಳೆ ಆಕೆಯನ್ನು ಮನವೊಲಿಸುವ ಪ್ರಯತ್ನ ಮಾಡಲಾಯಿತು. ಆದರೆ ಬೋಳು ಗಂಡನೊಂದಿಗೆ ವಾಸಿಸಲು ಆಕೆ ನಿರಾಕರಿಸಿದ್ದಾರೆ. ವಿವಾಹಿತ ಮಹಿಳೆಗೆ ಆಲೋಚಿಸಲು ಮತ್ತೊಂದು ಅವಕಾಶ ನೀಡಲಾಗಿದೆ. ಮುಂದಿನ ಕೌನ್ಸ್ಲಿಂಗ್ನಲ್ಲಿ ವಿವಾಹಿತ ಮಹಿಳೆಯ ನಿರ್ಧಾರವೇನೆಂಬುದು ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.