ಬೆಂಗಳೂರು/ಪಣಜಿ: ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿರುವ ಆರೋಪ ಎದುರಿಸುತ್ತಿರುವ ಬೆಂಗಳೂರಿನ ಸ್ಟಾರ್ಟ್ಅಪ್ ಕಂಪನಿಯ ಸಿಇಒ ಸುಚನಾ ಸೇಠ್ ಕುರಿತು ಮತ್ತಷ್ಟು ಮಾಹಿತಿಗಳು ಬೆಳಕಿಗೆ ಬರುತ್ತಿದೆ. ಬಾಲಕನ ಮೃತದೇಹವನ್ನು ಕಾರಿನಲ್ಲಿ ರವಾನಿಸಿದ್ದಾಗ ಪೊಲೀಸರ ಬಲೆಗೆ ಬಿದ್ದಿರುವ ಸಿಇಒ ತಾಯಿಯೇ ಈ ಕೊಲೆ ಮಾಡಿದ್ದಾರೆ ಎಂಬ ಎಂಬುದು ಜನರಿಗೆ ಗ್ರಹಿಸಲು ಸಾಧ್ಯವಾಗಲಿಲ್ಲ. ಆದರೆ, ಇದೀಗ ಇದಕ್ಕಿಂತ ಹೆಚ್ಚಾಗಿ ಕೃತ್ಯದ ಹಿಂದಿನ ಉದ್ದೇಶವು ಜನತೆಯನ್ನು ಬೆಚ್ಚಿ ಬೀಳಿಸುವಂತಿದೆ.
ಹೌದು, ಬೆಂಗಳೂರು ಮೂಲದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence- AI) ಸ್ಟಾರ್ಟ್ ಅಪ್ ಕಂಪನಿಯ ಸಿಇಒ ಆಗಿರುವ 39 ವರ್ಷದ ಆರೋಪಿ ಸುಚನಾ ಸೇಠ್ ಇಂತಹ ಅಪರಾಧಕ್ಕಾಗಿ ದೀರ್ಘಕಾಲದವರೆಗೆ ಯೋಜಿಸುತ್ತಿದ್ದರು ಎಂದು ಪೊಲೀಸರು ತನಿಖೆಯಲ್ಲಿ ಬಹಿರಂಗವಾಗಿದೆ. ತನ್ನ ಪತಿ ವೆಂಕಟ್ ರಮಣ್ ಅವರಿಂದ ಸುಚನಾ ವಿಚ್ಛೇದನ ಪಡೆದಿದ್ದಾರೆ. ಆದರೆ, ತನ್ನ ಮಗನಲ್ಲಿ ವಿಚ್ಛೇದಿತ ಪತಿಯನ್ನು ಕಾಣಲು ಆಕೆಗೆ ಇಷ್ಟ ಇರಲಿಲ್ಲ. ಹೀಗಾಗಿ ತನ್ನ ಮಗನನ್ನೂ ದ್ವೇಷಿಸಲು ಪ್ರಾರಂಭಿಸಿದ್ದರು. ಏಕೆಂದರೆ, ಬಾಲಕನ ಮುಖವು ತನ್ನ ತಂದೆಯನ್ನು ಹೋಲುತ್ತದೆ. ನಿರಂತರವಾಗಿ ಆತನನ್ನೇ ನೆನಪಿಸುತ್ತಿದೆ ಎಂಬುವುದಾಗಿ ಆರೋಪಿ ತಾಯಿ ಭಾವಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬ್ರಿಲಿಯಂಟ್ ಎಐ ವಿಜ್ಞಾನಿ ಸುಚನಾ: ಆದ್ದರಿಂದಲೇ, ಇದೊಂದು ಪೂರ್ವನಿಯೋಜಿತ ಕೃತ್ಯ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ಸದ್ಯದ ತನಿಖೆ ಪ್ರಕಾರ, ತಾಯಿ ಸುಚನಾ ಸೇಠ್ ತನ್ನ ಮಗುವಿಗೆ ಕೆಮ್ಮು ಸಿರಪ್ ನೀಡಿ, ಬಳಿಕ ಥಳಿಸಿ ಸಾಯಿಸಿದ್ದಾರಂತೆ. ಆದರೆ, ಈ ಪ್ರಕರಣ ಬೆಳಕಿಗೆ ಬರುವ ಮೊದಲು ಸುಚನಾ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಜ್ಞೆ ಮತ್ತು ಡೇಟಾ ವಿಜ್ಞಾನಿಯಾಗಿರುವ ಸುಚನಾ, ಡೇಟಾ ಸೈನ್ಸ್ ತಂಡಗಳಿಗೆ ಮಾರ್ಗದರ್ಶನ ಮತ್ತು ಸ್ಟಾರ್ಟ್ ಅಪ್‌ಗಳು ಹಾಗೂ ಉದ್ಯಮ ಸಂಶೋಧನಾ ಪ್ರಯೋಗಾಲಯಗಳಲ್ಲಿ ಮಷಿನ್ ಕಲಿಕೆಯ ಪರಿಹಾರ ಹುಡುವಲ್ಲಿ12 ವರ್ಷಗಳ ಅನುಭವವನ್ನು ಹೊಂದಿದ್ದಾರೆ.
ಅಲ್ಲದೇ, ಸುಚನಾ ಸೇಠ್ ಜಗತ್ತಿನ '100 ಜನ ಬ್ರಿಲಿಯಂಟ್ ವುಮೆನ್ ಇನ್ ಎಐ ಎಥಿಕ್ಸ್ ಲಿಸ್ಟ್-2021ರಲ್ಲಿ ಸ್ಥಾನ ಪಡೆದಿದ್ದರು. ಡೇಟಾ ಮತ್ತು ಸೊಸೈಟಿಯಲ್ಲಿ ಮೊಜಿಲ್ಲಾ ಫೆಲೋ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದ ಬರ್ಕ್‌ಮನ್ ಕ್ಲೈನ್ ಸೆಂಟರ್‌ನಲ್ಲೂ ಫೆಲೋ ಆಗಿದ್ದರು. ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಶೋಧನಾರ್ಥಿ ಆಗಿದ್ದು, ಸಹಜ ಭಾಷಾ ಸಂಸ್ಕರಣೆಯಲ್ಲಿ ಪೇಟೆಂಟ್‌ಗಳನ್ನು ಸಹ ಹೊಂದಿದ್ದಾರೆ.
ಬ್ರಿಲಿಯಂಟ್ ವುಮೆನ್ ಇನ್ ಎಐ ಎಥಿಕ್ಸ್ ಲಿಸ್ಟ್ನಲ್ಲಿ ಸ್ಥಾನ ಪಡೆದ ಸಾಧನೆಯ ನಂತರ ಸುಚನಾ, ''ಎಐ ಎಥಿಕ್ಸ್‌ನಲ್ಲಿ ಮಹತ್ವದ ಕೆಲಸ ಮಾಡುತ್ತಿರುವ ಮಹಿಳೆಯರ ಗುಂಪಿನ ಭಾಗವಾಗಲು ನಾನು ಉತ್ಸುಕಳಾಗಿದ್ದೇನೆ'' ಎಂದು ಹೆಮ್ಮೆಯಿಂದ ತಮ್ಮ ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದರು. ಯಶಸ್ಸಿ ಸಾಧನೆಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಅವರ ಪೋಸ್ಟ್‌ಗೆ ಅಭಿನಂದನಾ ಸಂದೇಶಗಳು ಹರಿದು ಬಂದಿದ್ದವು. ಆದರೆ, ಮಗನ ಸಾವಿನ ಪ್ರಕರಣ ಬೆಳಕಿಗೆ ಬಂದ ತಕ್ಷಣ ಎಲ್ಲವೂ ಬದಲಾಗಿದೆ. ಆಗ ಅದೇ ಪೋಸ್ಟ್ 'ನಿಮಗೆ ನಾಚಿಕೆಯಾಗಬೇಕು, ಅಸಹ್ಯಕರ ಮಹಿಳೆ'' ಎಂಬ ಕಾಮೆಂಟ್ಗಳು ಬರತೊಡಗಿವೆ.
ಆತ್ಮಹತ್ಯೆಗೂ ಯತ್ನಿಸಿದ್ದ ಸುಚನಾ: ಮತ್ತೊಂದೆಡೆ, ಮಗುವಿನ ಸಾವಿನ ಪ್ರಕರಣದ ತನಿಖೆಯಿಂದ ಇನ್ನಷ್ಟು ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ. ಮಗುವಿನ ಮೃತದೇಹವಿದ್ದ ಸೂಟ್‌ಕೇಸ್ ತೆರೆದಾಗ ಸುಚನಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಮೃತ ದೇಹವನ್ನು ಬಟ್ಟೆಯಿಂದ ಮುಚ್ಚಲಾಗಿತ್ತು. ಗೋವಾದಿಂದ ಬೆಂಗಳೂರಿಗೆ ಬರಲು ಟ್ಯಾಕ್ಸಿಯನ್ನು 30,000 ರೂಪಾಯಿಗೆ ಮುಗಿಸಿದ್ದರು. ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ಅಪಘಾತ ಸಂಭವಿಸಿದ್ದರಿಂದ ನಾಲ್ಕು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಜಾಮ್ ಇಲ್ಲದಿದ್ದರೆ ಬೇಗನೆ ಬೆಂಗಳೂರು ತಲುಪುತ್ತಿದ್ದರು.
ಬೆಂಗಳೂರು ತಲುಪಿದ ನಂತರ ಆರೋಪಿ ತಾಯಿ ಸೂಟ್ಕೇಸ್ಅನ್ನು ತನ್ನ ವಾಹನಕ್ಕೆ ಹಾಕಿಕೊಂಡು ಮತ್ತು ಶವವನ್ನು ವಿಲೇವಾರಿ ಮಾಡಲು ಯೋಜಿಸುತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಈ ಎಲ್ಲ ಯೋಜನೆ ವಿಫಲವಾಗಿ ಬಂಧನಕ್ಕೆ ಒಳಗಾಗಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಸುಚನಾ, ಮಗನು ತನ್ನ ತಂದೆಯ ವಿಡಿಯೋ ಕಾಲ್‌ನಲ್ಲಿ ಮಾತನಾಡುವುದನ್ನು ತಡೆಯಲು ಮುಖದ ಮೇಲೆ ತಲೆದಿಂಬಿನಿಂದ ಒತ್ತುವ ಮೂಲಕ ಪ್ರಜ್ಞೆತಪ್ಪಿಸಲು ಪ್ರಯತ್ನಿಸಿದ್ದೆ. ಆಗ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ. ಬಳಿಕ ಕೈ ತಾನು ಕೈಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೆ. ಇದು ಸಾಧ್ಯವಾಗದೆ ದೇಹವನ್ನು ಸೂಟ್‌ಕೇಸ್‌ಗೆ ತುಂಬಿ ಹೋಟೆಲ್‌ನಿಂದ ಹೊರಗೆ ಬಂದೆ ಎಂಬುವುದಾಗಿ ಬಾಯ್ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮುಂದುವರೆದು, ಮಗ ತನ್ನ ತಂದೆಯೊಂದಿಗೆ ಮಾತನಾಡುವುದು ನನಗೆ ಇಷ್ಟವಿರಲಿಲ್ಲ ಎಂದೂ ಸುಚನಾ ತಪ್ಪೊಪ್ಪಿಕೊಂಡಿದ್ದಾರೆ. ನ್ಯಾಯಾಲಯವು ಮಗುವನ್ನು ಭೇಟಿ ಮಾಡಲು ತಂದೆಗೆ ಅವಕಾಶ ನೀಡಿತ್ತು. ಇದನ್ನು ಈ ರೀತಿ ಎಸಗಿರುವುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ವಿಚ್ಛೇದಿತ ಪತಿ ವೆಂಕಟ್ ರಮಣ್ ಇಂಡೋನೇಷ್ಯಾದ ಜಕಾರ್ತದಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಗೋವಾ ಪೊಲೀಸ್ ಠಾಣೆಗೆ ಪತಿ ಹಾಜರು: ಮತ್ತೊಂದೆಡೆ, ವೆಂಕಟ್ ರಮಣ್ ಪ್ರಕರಣದ ವಿಚಾರಣೆಗಾಗಿ ಗೋವಾದ ಕಲಾಂಗುಟ್ ಪೊಲೀಸರ ಮುಂದೆ ಶನಿವಾರ ಹಾಜರಾಗಿದ್ದಾರೆ. ಬೆಂಗಳೂರಿನಿಂದ ಆಗಮಿಸಿ ಕಲಾಂಗುಟ್ ಠಾಣೆಗೆ ಬಂದಿದ್ದಾರೆ. ನಾವು ತನಿಖೆಯ ಭಾಗವಾಗಿ ಪ್ರಕರಣದಲ್ಲಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತೇವೆ ಎಂದು ಗೋವಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಮಗು ಕೊಲೆ ಕೇಸ್: ಪ್ರಮುಖ ಪುರಾವೆಯಾಗಿ ಐಲೈನರ್ ನಿಂದ ಗೀಚಲಾದ ಟಿಪ್ಪಣಿ ಪತ್ತೆ