ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಿದ ನಮ್ಮ ಶಸ್ತ್ರಾಸ್ತ್ರಗಳನ್ನು ನಾವೇ ಗೌರವಿಸದ ಹೊರತು ಜಗತ್ತು ಗೌರವಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನೇವಲ್ ಇನ್ನೋವೇಶನ್ ಮತ್ತು ಇಂಡಿಜೆನೈಸೇಶನ್ ಆರ್ಗನೈಸೇಶನ್ (NIIO) ಸೆಮಿನಾರ್ 'ಸ್ವಾವಲಂಬನ್' ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನೀವು ನಿಮ್ಮ ಸ್ವಂತ ಮಗುವಿಗೆ ಪ್ರೀತಿ ಮತ್ತು ಗೌರವ ನೀಡದೆ ನೆರೆಹೊರೆಯವರಿಂದ ಅದನ್ನು ನಿರೀಕ್ಷಿಸಲು ಹೇಗೆ ಸಾಧ್ಯ.
ನಾವು ನಮ್ಮ ಉತ್ಪನ್ನಗಳಿಗೆ ಬೆಲೆ ಕೊಡುವುದಿಲ್ಲ ಅಂದಮೇಲೆ ಜಗತ್ತು ನಮ್ಮಲ್ಲಿ ಹೂಡಿಕೆ ಮಾಡುತ್ತದೆ ಎಂದು ನಾವು ಹೇಗೆ ನಿರೀಕ್ಷಿಸಬಹುದು?. ದೇಶೀಯವಾಗಿ ಅಭಿವೃದ್ಧಿಪಡಿಸಿದ ಬ್ರಹ್ಮೋಸ್‌ನಲ್ಲಿ ನಾವು ವಿಶ್ವಾಸವನ್ನು ತೋರಿಸಿದಾಗ, ಜಗತ್ತು ಕೂಡ ಇಷ್ಟಪಡುತ್ತದೆ ಎಂದು ಹೇಳಿದರು.
ನಾವು ಸರಳ ಉತ್ಪನ್ನಗಳಿಗೂ ಸಹ ವಿದೇಶಗಳನ್ನು ಅವಲಂಬಿಸುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದೇವೆ. ಮಾದಕ ವ್ಯಸನಿಗಳಂತೆ ನಾವು ವಿದೇಶದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳಿಗೆ ವ್ಯಸನಿಯಾಗಿದ್ದೇವೆ. ಈ ಮನಸ್ಥಿತಿಯನ್ನು ಬದಲಾಯಿಸಲು ನಾವು 2014ರ ನಂತರ ಮಿಷನ್ ಮೋಡ್‌ನಲ್ಲಿ ಕೆಲಸ ಮಾಡಿದ್ದೇವೆ ಎಂದು ವಿವರಿಸಿದರು.
ಮುಂದಿನ ವರ್ಷ ಆಗಸ್ಟ್ 15 ರೊಳಗೆ ನೌಕಾಪಡೆಗೆ 75 ಸ್ಥಳೀಯ ತಂತ್ರಜ್ಞಾನವನ್ನು ರಚಿಸುವುದು ಮೊದಲ ಹೆಜ್ಜೆಯಾಗಿದೆ. ನಾವು 100 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವ ಹೊತ್ತಿಗೆ ಭಾರತದ ರಕ್ಷಣೆಯಲ್ಲಿ ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯುವುದೇ ಗುರಿಯಾಗಿರಬೇಕು ಎಂದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ಭಾರತೀಯ ರಕ್ಷಣಾ ತಯಾರಕರ ಸೊಸೈಟಿ (ಎಸ್‌ಐಡಿಎಂ) ಅಧ್ಯಕ್ಷ ಎಸ್‌ಪಿ ಶುಕ್ಲಾ ಈ ವೇಳೆ ಹಾಜರಿದ್ದರು.
ಇದನ್ನೂ ಓದಿ: ಬಂಧನದಿಂದ ತಡೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ನೂಪುರ್ ಶರ್ಮಾ.. ನಾಳೆ ವಿಚಾರಣೆ