ಲಖನೌ (ಉತ್ತರ ಪ್ರದೇಶ): ಕಳೆದ ಏಪ್ರಿಲ್‌ನಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆದ ಗ್ಯಾಂಗ್ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್ ಹಾಗೂ ಈತನ ಸಹೋದರ ಅಶ್ರಫ್ ಅಹ್ಮದ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾಯಾಂಗ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರಿಗೆ ಭತ್ಯೆ ಪಾವತಿಸಲು ಉತ್ತರ ಪ್ರದೇಶ ಸರ್ಕಾರ 1.34 ಕೋಟಿ ರೂಪಾಯಿ ಭರಿಸುತ್ತಿದೆ. ಭತ್ಯೆ ಪಾವತಿ ಕುರಿತು ರಾಜ್ಯ ಗೃಹ ಇಲಾಖೆ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ.
ಅತೀಕ್ ಅಹ್ಮದ್ ಸಹೋದರ ಕೊಲೆ ಪ್ರಕರಣದ ತನಿಖೆ ಕುರಿತು ರಾಜ್ಯ ಸರ್ಕಾರ ನ್ಯಾಯಾಂಗ ಆಯೋಗ ರಚಿಸಿದೆ. ಈ ಆಯೋಗದಲ್ಲಿ ಅಲಹಾಬಾದ್ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ದಿಲೀಪ್ ಬಾಬಾಸಾಹೇಬ್ ಭೋಸಲೆ, ಜಾರ್ಖಂಡ್ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ವೀರೇಂದ್ರ ಸಿಂಗ್, ನಿವೃತ್ತ ನ್ಯಾಯಮೂರ್ತಿ ಅರವಿಂದ್ ಕುಮಾರ್ ತ್ರಿಪಾಠಿ, ಮತ್ತು ಮಾಜಿ ಡಿಜಿಪಿ ಸುಭೇಶ್ ಕುಮಾರ್ ಸಿಂಗ್ ಹಾಗೂ ಮಾಜಿ ಜಿಲ್ಲಾ ನ್ಯಾಯಾಧೀಶ ಬ್ರಿಜೇಶ್ ಕುಮಾರ್ ಸೋನಿ ಇದ್ದಾರೆ.
ಇದನ್ನೂ ಓದಿ: ಡಾನ್ ಅತೀಕ್ ಅಹ್ಮದ್ ಹತ್ಯೆ: ಮಾದಕ ವ್ಯಸನಿ, ನಿರುದ್ಯೋಗಿಗಳಾಗಿದ್ದ ಶೂಟರ್ಗಳಿಂದ ಹತ್ಯೆ
ಗೃಹ ಇಲಾಖೆ ಆದೇಶದ ಪ್ರಕಾರ, ಆಯೋಗದ ಅಧ್ಯಕ್ಷರಾದ ಮಾಜಿ ಮುಖ್ಯ ನ್ಯಾಯಮೂರ್ತಿ ಬೋಸಲೆ ಹಾಗೂ ಆಯೋಗದ ಉಪಾಧ್ಯಕ್ಷರಾದ ಮಾಜಿ ಮುಖ್ಯ ನ್ಯಾಯಮೂರ್ತಿ ಸಿಂಗ್ ಅವರಿಗೆ ತಲಾ 30 ಲಕ್ಷ ರೂಪಾಯಿ ಭತ್ಯೆ ಪಾವತಿಸಲಾಗುತ್ತಿದೆ. ಉಳಿದಂತೆ ನಿವೃತ್ತ ನ್ಯಾಯಮೂರ್ತಿ ತ್ರಿಪಾಠಿ, ಮಾಜಿ ಡಿಜಿಪಿ ಸಿಂಗ್ ಮತ್ತು ನಿವೃತ್ತ ಜಿಲ್ಲಾ ನ್ಯಾಯಾಧೀಶ ಸೋನಿ ಅವರಿಗೆ ತಲಾ 20 ಲಕ್ಷ ರೂ. ಭತ್ಯೆ ನೀಡಲಾಗುತ್ತಿದೆ.
ಅಲ್ಲದೇ, ತನಿಖಾ ಆಯೋಗವು ನೇಮಿಸಿದ ಅಮಿಕಸ್ ಕ್ಯೂರಿ ರಾಹುಲ್ ಅಗರ್ವಾಲ್ ಅವರಿಗೆ 5 ಲಕ್ಷ ರೂಪಾಯಿಗಳನ್ನು ಪಾವತಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಪರ ವಾದ ಮಂಡಿಸುವುದರೊಂದಿಗೆ ಆಯೋಗಕ್ಕೆ ಸಹಕರಿಸಲು ಸಹಾಯಕ ವಕೀಲ ನಿಖಿಲ್ ಮಿಶ್ರಾ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ಮನೀಶ್ ಗೋಯಲ್ ಅವರಿಗೆ ಕ್ರಮವಾಗಿ 2 ಲಕ್ಷ ರೂ. ಮತ್ತು 7 ಲಕ್ಷ ರೂಪಾಯಿಗಳನ್ನು ಪಾವತಿಸುತ್ತಿರುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅತೀಕ್ ಪ್ರಕರಣ ಹಿನ್ನೆಲೆ: ಮೂಲತಃ ಒಬ್ಬ ಮಾಫಿಯಾ ಡಾನ್ ಆಗಿದ್ದ ಅತೀಕ್ ಅಹ್ಮದ್ 1989ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ. ಅಲ್ಲಿಂದ ಐದು ಬಾರಿ ವಿಧಾನಸಭೆ ಮತ್ತು 2004ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದ. ಅತೀಕ್ ಸುಮಾರು 100 ಪ್ರಕರಣಗಳು ಹಾಗೂ ಸಹೋದರ ಅಶ್ರಫ್ ಅಂದಾಜು 50 ಪ್ರಕರಣಗಳನ್ನು ಎದುರಿಸುತ್ತಿದ್ದ. 2005ರಲ್ಲಿ ನಡೆದ ಬಿಎಸ್ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣ ಮತ್ತು 2023ರ ಫೆಬ್ರವರಿಯಲ್ಲಿ ನಡೆದ ವಕೀಲ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಇಬ್ಬರು ಅರೆಸ್ಟ್ ಆಗಿದ್ದರು.
ಏಪ್ರಿಲ್ 15ರಂದು ಪ್ರಯಾಗ್‌ರಾಜ್‌ನಲ್ಲಿ ಅತೀಕ್ ಮತ್ತು ಅಶ್ರಫ್ ಇಬ್ಬರನ್ನೂ ವೈದ್ಯಕೀಯ ಚಿಕಿತ್ಸೆಗಾಗಿ ಪೊಲೀಸರು ಕರೆದುಕೊಂಡು ಹೋಗಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ ಇಬ್ಬರಿಗೂ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದರು. ನಂತರ ಪ್ರಕರಣದ ತನಿಖೆಗಾಗಿ ಮೂರು ಸದಸ್ಯರ ಆಯೋಗ ರಚಿಸಲಾಗಿತ್ತು. ಬಳಿಕ ಇತರ ಇಬ್ಬರು ಸದಸ್ಯರನ್ನು ಆಯೋಗಕ್ಕೆ ನೇಮಿಸಲಾಗಿತ್ತು. ಮತ್ತೊಂದೆಡೆ, ಸುಪ್ರೀಂ ಕೋರ್ಟ್ ಇಬ್ಬರ ಹತ್ಯೆ ತನಿಖೆಗೆ ತೆಗೆದುಕೊಂಡ ಕ್ರಮಗಳ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಇದನ್ನೂ ಓದಿ: ಗ್ಯಾಂಗ್ಸ್ಟರ್ - ರಾಜಕಾರಣಿ ಅತೀಕ್ ಅಹ್ಮದ್, ಸಹೋದರ ಅಶ್ರಫ್ಗೆ ಗುಂಡಿಕ್ಕಿ ಹತ್ಯೆ