ನವದೆಹಲಿ : ದೇಶದ ರಕ್ಷಣಾ ಸಚಿವಾಲಯದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗುವ ಸೈನಿಕರು ಮತ್ತು ಮಹಿಳಾ ಸಿಬ್ಬಂದಿಯನ್ನು ಕೃಷಿಯತ್ತ ಸೆಳೆಯಲು ಹಾಗೂ ಅವರನ್ನು ಕೃಷಿ ಉದ್ಯಮಿಗಳಾಗಿ ಮಾಡಲು ಕೇಂದ್ರ ಸರ್ಕಾರ ಹೊಸ ಯೋಜನೆ ರೂಪಿಸಿದೆ. ಅದಕ್ಕೆ ‘ಜೈ ಜವಾನ್ ಕಿಸಾನ್’ ಎಂದು ಹೆಸರಿಡಲಾಗಿದ್ದು, ಶೀಘ್ರವೇ ಈ ಯೋಜನೆಗೆ ಜಾರಿಗೆ ಬರುವ ನಿರೀಕ್ಷೆ ಇದೆ.
ಹೈದರಾಬಾದ್‌ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಎಕ್ಸ್‌ಟೆನ್ಶನ್ ಅಂಡ್ ಮ್ಯಾನೇಜ್‌ಮೆಂಟ್ (ಮ್ಯಾನೇಜ್) ಸಂಸ್ಥೆಯು ‘ಜೈ ಜವಾನ್ ಕಿಸಾನ್’ ಯೋಜನೆಯನ್ನು ಸಿದ್ಧಪಡಿಸಿದೆ. ಇದಕ್ಕೆ ರಕ್ಷಣಾ ಸಚಿವಾಲಯವೂ ಅನುಮೋದನೆ ನೀಡಿದೆ. ಈ ಯೋಜನೆಯಡಿ ರಕ್ಷಣಾ ಸಚಿವಾಲಯವು ಸಹಕಾರ ನೀಡಿದರೆ ನಿವೃತ್ತಿಯ ಮೊದಲು ಅಥವಾ ನಿವೃತ್ತಿಯ ನಂತರ ಸೈನಿಕರಿಗೆ ಕೃಷಿ, ಮಾರುಕಟ್ಟೆ, ಕೃಷಿ ಉದ್ಯಮಶೀಲತೆ ಸೇರಿ ಕೃಷಿ ವಲಯದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಕುರಿತು ತರಬೇತಿ ನೀಡುವ ಬಗ್ಗೆ 'ಮ್ಯಾನೇಜ್' ಇಟ್ಟಿರುವ ಈ ಪ್ರಸ್ತಾವನೆಯನ್ನೂ ಸರ್ಕಾರ ಒಪ್ಪಿಕೊಂಡಿದೆ.
ಶೇ.90-99ರಷ್ಟು ಯೋಧರು ಗ್ರಾಮೀಣರು : ದೇಶಾದ್ಯಂತ ಪ್ರತಿ ವರ್ಷ ರಕ್ಷಣಾ ಇಲಾಖೆಯಿಂದ ಯೋಧರು ಸೇರಿ ಸುಮಾರು 60 ಸಾವಿರ ಸಿಬ್ಬಂದಿ ನಿವೃತ್ತಿ ಹೊಂದುತ್ತಾರೆ. ನಿವೃತ್ತಿಯ ಸಮಯದಲ್ಲಿ ಅವರೆಲ್ಲರ ವಯಸ್ಸು 34ರಿಂದ 48ರವರೆಗೆ ಮಾತ್ರ ಇರುತ್ತದೆ. ನಿವೃತ್ತಿ ಹೊಂದಿದ ಬಳಿಕ ಹೆಚ್ಚು ಜನರು ಮತ್ತೆ ಬೇರೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಾರೆ. ಅದರಲ್ಲೂ ಶೇ.90ರಿಂದ 99ರಷ್ಟು ಯೋಧರು ಮತ್ತು ರಕ್ಷಣಾ ಇಲಾಖೆಯ ಸಿಬ್ಬಂದಿ ಗ್ರಾಮೀಣ ಪ್ರದೇಶದವರಾಗಿದ್ದು, ಶೇ.80.60ರಷ್ಟು ಜನರು ಹಳ್ಳಿಗಳಲ್ಲೇ ವಾಸಿಸುತ್ತಾರೆ ಎಂದು 'ಮ್ಯಾನೇಜ್' ಅಧ್ಯಯನದಿಂದ ತಿಳಿದು ಬಂದಿದೆ.
ಆದಾಗ್ಯೂ, ರಕ್ಷಣಾ ಸಿಬ್ಬಂದಿಗೆ ಕೃಷಿ ಬಗ್ಗೆ ಹೆಚ್ಚಿನ ಜ್ಞಾನ ಇಲ್ಲ. ಅದಕ್ಕಾಗಿಯೇ ನಿವೃತ್ತಿ ನಂತರ ಅವರು ಕೃಷಿಯಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂಬುವುದೂ ಸಹ ಅಧ್ಯಯನದ ವೇಳೆ ಗೊತ್ತಾಗಿದೆ. ಇದನ್ನು ನಿವಾರಿಸಲು ಮತ್ತು ನಿವೃತ್ತ ಯೋಧರನ್ನು ಕೃಷಿಯತ್ತ ಸೆಳೆಯಲು ಈ ಯೋಜನೆ ರೂಪಿಸಲಾಗಿದೆ. ಅಲ್ಲದೇ, ಮಾಜಿ ಸೈನಿಕರು ಕೃಷಿಗೆ ಬರುವುದರಿಂದ ಹೆಚ್ಚಿನ ಇಳುವರಿಗೆ ಕಾರಣವಾಗುತ್ತದೆ ಮತ್ತು ಉತ್ತಮ ತರಬೇತಿ ಪಡೆದು ಅವರು ಕೃಷಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಹಳ್ಳಿಗಳಲ್ಲಿ ಒಳ್ಳೆಯ ಮಾನವ ಸಂಪನ್ಮೂಲ ವೃದ್ಧಿಯೂ ಆಗಲಿದೆ ಎಂದು 'ಮ್ಯಾನೇಜ್' ಹೇಳಿದೆ.
ಜುಲೈನಿಂದ ತರಬೇತಿ ಆರಂಭ : ಈ ಯೋಜನೆ ಅನ್ವಯ ಸೈನಿಕರಿಗೆ ತರಬೇತಿ ನೀಡಲು ಸಿದ್ಧತೆ ಸಹ ಮಾಡಿಕೊಳ್ಳಲಾಗುತ್ತಿದೆ. ಹೈದರಾಬಾದ್‌ನಲ್ಲಿ ಜುಲೈನಲ್ಲಿ ತರಬೇತಿ ಪ್ರಾರಂಭವಾಗುವ ಸಾಧ್ಯತೆ ಇದ್ದು, ಮೊದಲ ಬ್ಯಾಚ್‌ನಲ್ಲಿ 30 ಜನ ಮಾಜಿ ಸೈನಿಕರಿಗೆ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ. ಅದೇ ರೀತಿಯಾಗಿ ಈ ವರ್ಷದಲ್ಲಿ ಕನಿಷ್ಠ 4 ತಂಡಗಳಿಗೆ ತರಬೇತಿ ನೀಡುವ ಗುರಿ ಸಹ ಇದೆ. ಜತೆಗೆ ಕೃಷಿ ತಜ್ಞರೊಂದಿಗೆ ಸೈನಿಕರಿಗೆ ಸಂರ್ಪಕ ಬೆಳೆಸಲಾಗುತ್ತದೆ. ರಕ್ಷಣಾ ಸಿಬ್ಬಂದಿ ಶಿಸ್ತಿನ ವ್ಯಕ್ತಿಗಳು ಆಗಿರುವುದಿರಂದ ಕೃಷಿಗೂ ಶಿಸ್ತು ತರುವ ನಿರೀಕ್ಷೆಯು ಈ ಯೋಜನೆಯದ್ದಾಗಿದೆ.
ನಮ್ಮದು ಕೃಷಿ ಪ್ರಧಾನವಾದ ದೇಶವಾಗಿದೆ. ಇಲ್ಲಿ ಕೃಷಿಯೇ ಅತಿ ದೊಡ್ಡ ಕ್ಷೇತ್ರ. ಆದರೆ, ಕೃಷಿ ಮತ್ತು ಅದರ ಸಂಬಂಧಿತ ಕೈಗಾರಿಕೆಗಳಿಗೆ ನಿಪುಣರ ಕೊರತೆಯಿದೆ. ಕ್ರಮಬದ್ಧ ಕೃಷಿಯಲ್ಲಿ ತೊಡಗಿದರೆ ಒಳ್ಳೆಯ ಮತ್ತು ಹೆಚ್ಚಿನ ಫಸಲು, ಆದಾಯ ಬರಲು ಸಾಧ್ಯವಿದೆ. ಇದನ್ನು ಬಹುಪಾಲು ಜನರು ಅರ್ಥ ಮಾಡಿಕೊಂಡಿಲ್ಲ. ಶಿಸ್ತಿನಿಂದ ಕಷ್ಟಪಟ್ಟು ಕೃಷಿ ಮಾಡಿದರೆ ಉತ್ತಮ ಇಳುವರಿ ಖಂಡಿತ ಪಡೆಯಬಹುದು. ನಿವೃತ್ತ ಯೋಧರು ಬೆಳೆ ಬೆಳೆಯುವುದು ಮಾತ್ರವಲ್ಲದೆ ಮಾರುಕಟ್ಟೆ, ಮೌಲ್ಯವರ್ಧಿತ ಉತ್ಪನ್ನಗಳು, ಬ್ರ್ಯಾಂಡಿಂಗ್ನಲ್ಲಿ ಯಶಸ್ವಿಯಾದರೆ, ರೈತರಿಗೂ ಇದು ಉತ್ತಮ ಮಾದರಿಯಾಗಲಿದೆ ಎನ್ನುತ್ತಾರೆ ಮ್ಯಾನೇಜ್ನ ಮಹಾನಿರ್ದೇಶಕ ಡಾ.ಚಂದ್ರಶೇಖರ್.
ಇದನ್ನೂ ಓದಿ: 7 ವರ್ಷಗಳಲ್ಲಿ 4 ಕೋಟಿ ನಕಲಿ ಪಡಿತರ ಚೀಟಿ ರದ್ದು.. ಕೇಂದ್ರ ಸರ್ಕಾರದ ಮಾಹಿತಿ