ನವದೆಹಲಿ: ಇತ್ತೀಚೆಗೆ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ದೇಶದೇಶಗಳ ನಡುವೆ ಇರುವ ದ್ವಿಪಕ್ಷೀಯ ಸಂಬಂಧದಲ್ಲಿ ಕೆಲವೊಮ್ಮೆ ಸ್ಪಷ್ಟತೆ ಸಿಕ್ಕರೆ, ಇನ್ನೂ ಕೆಲವೊಮ್ಮೆ ಗೊಂದಲ ಸೃಷ್ಟಿಯಾಗುತ್ತಿದೆ. ಉಕ್ರೇನ್ ಮತ್ತು ರಷ್ಯಾ ಯುದ್ಧ ಮುಂದುವರೆದಿದ್ದು, ಈ ಬೆನ್ನಲ್ಲೇ ಭಾರತಕ್ಕೆ ಭೇಟಿ ನೀಡಿರುವ ಬ್ರಿಟನ್ನ ವಿದೇಶಾಂಗ ಕಾರ್ಯದರ್ಶಿ ಎಲಿಜಬೆತ್ ಟ್ರಸ್, 'ಭಾರತದೊಂದಿಗಿನ ಸಂಬಂಧವನ್ನು ಬಲಿಷ್ಟಗೊಳಿಸುವುದು ಅತ್ಯಂತ ಮುಖ್ಯ' ಎಂದು ಹೇಳಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಜೊತೆ ಮಾತನಾಡಿದ ಅವರು, ನಾವು ಅತ್ಯಂತ ಅಸುರಕ್ಷಿತ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಉಕ್ರೇನ್ನಲ್ಲಿ ಈಗ ಆಗಿರುವ ಬಿಕ್ಕಟ್ಟು ಸಮಾನ ಮನಸ್ಕ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವ ಅಗತ್ಯತೆಯನ್ನು ಒತ್ತಿ ಹೇಳುತ್ತಿದೆ. ಉಕ್ರೇನ್ ಬಿಕ್ಕಟ್ಟಿನ ಪರಿಣಾಮಗಳು ಭವಿಷ್ಯದಲ್ಲಿ ಇನ್ನೂ ಹೆಚ್ಚಾಗಲಿವೆ. ಜಾಗತಿಕ ಆಹಾರ ಅಭದ್ರತೆಯೂ ಕೂಡಾ ಕಾಡುತ್ತಿದೆ. ಇಂಧನ ಪೂರೈಕೆ ವಿಚಾರದಲ್ಲಿ ಕೂಡಾ ಅವ್ಯವಸ್ಥೆ ಉಂಟಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಅನೇಕ ರಾಷ್ಟ್ರಗಳು ಉಕ್ರೇನ್ ಬೆಂಬಲಿಸಿದ್ದವು. ಅಮೆರಿಕದ ನಿರ್ಧಾರಗಳ ಪರವಾಗಿ ಕೆಲವೊಂದು ರಾಷ್ಟ್ರಗಳು ನಿಂತವು. ಭಾರತ ಮಾತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ತಟಸ್ಥ ನೀತಿಯನ್ನು ಅನುಸರಿಸಿದೆ. ಅಮೆರಿಕದ ಬೆದರಿಕೆಗೆ ಸೊಪ್ಪು ಹಾಕದೇ ರಷ್ಯಾ ಜೊತೆಗಿನ ಸ್ನೇಹವನ್ನು ಗಟ್ಟಿಗೊಳಿಸಿತ್ತು. ಭಾರತ ರಿಯಾಯಿತಿ ದರದಲ್ಲಿ ರಷ್ಯಾದಿಂದ ಇಂಧನ ಕೊಂಡುಕೊಂಡಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಟ್ರಸ್, 'ಭಾರತ ಸಾರ್ವಭೌಮ ರಾಷ್ಟ್ರ. ಅದಕ್ಕೆ ಏನು ಮಾಡಬೇಕೆಂದು ಗೊತ್ತಿದೆ. ಇಂಥ ಸಂದರ್ಭದಲ್ಲಿ ಏನು ಮಾಡಬೇಕೆಂದು ನಾವು ಹೇಳಲು ಹೋಗುವುದಿಲ್ಲ' ಎಂದಿದ್ದಾರೆ.
ಇದೇ ವೇಳೆ ಪ್ರತಿಕ್ರಿಯೆ ನೀಡಿದ ಜೈಶಂಕರ್, 'ತೈಲ ಬೆಲೆಗಳು ಹೆಚ್ಚಾದಾಗ ದೇಶಗಳು ಕಡಿಮೆ ದರದಲ್ಲಿ ವ್ಯಾಪಾರ ಮಾಡುವ ದೇಶಗಳನ್ನು ಹುಡುಕುವುದು ಸಾಮಾನ್ಯ. ಬಿಕ್ಕಟ್ಟಿನ ನಡುವೆಯೂ ಯುರೋಪ್ನ ದೇಶಗಳು ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸುತ್ತಿದೆ. ಯುರೋಪ್ನ ರಾಷ್ಟ್ರಗಳು ಒಂದು ತಿಂಗಳ ಹಿಂದೆ ರಷ್ಯಾದಿಂದ ಶೇಕಡಾ 15ರಷ್ಟು ಹೆಚ್ಚು ಪಟ್ಟು ತೈಲ ಮತ್ತು ಅನಿಲವನ್ನು ಖರೀದಿಸಿವೆ. ಯೂರೋಪ್ನಲ್ಲಿ ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿ ಮಾಡುವ ರಾಷ್ಟ್ರಗಳು ಹೆಚ್ಚಾಗಿವೆ' ಎಂದು ವಿವರಿಸಿದರು.
ಭಾರತಕ್ಕೆ ಇಂಧನ ಮತ್ತು ಅನಿಲ ಸರಬರಾಜನ್ನು ಅನೇಕ ರಾಷ್ಟ್ರಗಳು ಮಾಡುತ್ತಿವೆ. ನಾವು ಬಹುಪಾಲು ಕಚ್ಚಾ ತೈಲ ಮತ್ತು ಅನಿಲವನ್ನು ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಪಡೆಯುತ್ತೇವೆ. ಅಮೆರಿಕದಿಂದ ಶೇಕಡಾ 7.5ರಿಂದ ಶೇಕಡಾ 8ರಷ್ಟು ಇಂಧನ ಪಡೆಯುತ್ತೇವೆ. ರಷ್ಯಾದಿಂದ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇಂಧನ ಪಡೆಯುತ್ತೇವೆ ಎಂದು ಜೈಶಂಕರ್ ತಿಳಿಸಿದರು.
ದಶಕಗಳಿಂದ ರಷ್ಯಾದೊಂದಿಗೆ ಉತ್ತಮ ಸ್ನೇಹ ಹೊಂದಿರುವ ಭಾರತ ಈವರೆಗೆ ತಟಸ್ಥ ನಿಲುವನ್ನು ಹೊಂದಿದೆ. ರಷ್ಯಾವನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯಗಳಿಂದ ಭಾರತ ದೂರವಿದ್ದು, ಅಮೆರಿಕದ ಎಚ್ಚರಿಕೆಗಳಿಗೆ ತಲೆಕೆಡಿಸಿಕೊಂಡಿಲ್ಲ. ಈ ಬೆನ್ನಲ್ಲೇ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿಯ ಭೇಟಿ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ನಮ್ಮ ಜನರು ಯಾರ ಮುಂದೆಯೂ ತಲೆಬಾಗಲು ಬಿಡಲ್ಲ: ಪಾಕ್ ಉದ್ದೇಶಿಸಿ ಇಮ್ರಾನ್ ಖಾನ್ ಭಾಷಣ