ಕೋಟಾ (ರಾಜಸ್ಥಾನ): ನಗರದಲ್ಲಿ ನೀಟ್‌ಗೆ ತಯಾರಿ ನಡೆಸುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಈ ವರ್ಷ ಕೋಟಾದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಗಳ ಸಂಖ್ಯೆ 22 ಕ್ಕೆ ಏರಿದೆ. ಐದು ಗಂಟೆಗಳ ಅವಧಿಯಲ್ಲಿ ಈ ಎರಡೂ ಘಟನೆಗಳು ಸಂಭವಿಸಿರುವುದು ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಆವಿಷ್ಕರ್ ಶಂಬಾಜಿ ಕಾಸ್ಲೆ (17) ಮಧ್ಯಾಹ್ನ 3.15 ರ ಸುಮಾರಿಗೆ ಜವಾಹರ್ ನಗರದ ಕೋಚಿಂಗ್ ಸೆಂಟರ್ ಕಟ್ಟಡದ ಆರನೇ ಮಹಡಿಯಿಂದ ಜಿಗಿದಿದ್ದಾನೆ. ಪರೀಕ್ಷೆ ಬರೆದ ಬಳಿಕ ವಿದ್ಯಾರ್ಥಿ ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ. ಕೆಳಗೆ ಬಿದ್ದ ವಿದ್ಯಾರ್ಥಿಯನ್ನು ಸಂಸ್ಥೆಯ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಮಾರ್ಗಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ ಎಂದು ವಿಜ್ಞಾನ ನಗರ ಪೊಲೀಸ್ ಅಧಿಕಾರಿ ಧರಂವೀರ್ ಸಿಂಗ್ ಹೇಳಿದ್ದಾರೆ.
ಆವಿಷ್ಕರ್ ಶಂಬಾಜಿ ಕಾಸ್ಲೆ ಸಾವನ್ನಪ್ಪಿದ ನಾಲ್ಕೈದು ಗಂಟೆಗಳ ನಂತರ ಆದರ್ಶ್ ರಾಜ್ (18) ಎಂಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರ್ಶ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ. ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಕುನ್ಹಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತನ್ನ ಬಾಡಿಗೆ ಫ್ಲಾಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುನ್ಹಾಡಿ ಪೊಲೀಸ್ ಠಾಣೆಯ ಸಿಒ ಕೆಎಸ್ ರಾಥೋಡ್ ಮಾತನಾಡಿ, ಆದರ್ಶ್ ಅವರ ಸಹೋದರಿ ಮತ್ತು ಸೋದರಸಂಬಂಧಿ ಫ್ಲ್ಯಾಟ್‌ಗೆ ಸಂಜೆ 7.30 ರ ಸುಮಾರಿಗೆ ತಲುಪಿದ್ದಾರೆ. ಆಗ ರೂಂನ ಬಾಗಿಲನ್ನು ತಟ್ಟಿದ್ದಾರೆ. ಆದ್ರೆ ಒಳಗಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದಿದ್ದಾಗ ಸಹೋದರರು ಮತ್ತು ಸಹೋದರಿ ಬಾಗಿಲು ಮುರಿದು ಒಳಗೆ ತೆರಳಿದ್ದಾರೆ. ಆಗ ಆದರ್ಶ್ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರ್ಶ್ ರಾಜ್ನನ್ನು ಕೆಳಗಿಳಿಸಿದಾಗ ಆತ ಉಸಿರಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದ್ರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆದರ್ಶ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಕಾಸ್ಲೆ ಮಹಾರಾಷ್ಟ್ರದ ಲಾತೂರ್ ನಿವಾಸಿ: ಇವರಲ್ಲಿ ಆವಿಷ್ಕಾರ್ ಶಂಬಾಜಿ ಕಾಸ್ಲೆ ಮಹಾರಾಷ್ಟ್ರದ ಲಾತೂರ್ ನಿವಾಸಿಯಾಗಿದ್ದು, ಮೂರು ವರ್ಷಗಳಿಂದ ಕೋಟಾದಲ್ಲಿ ನೀಟ್ ಯುಜಿಗೆ ತಯಾರಿ ನಡೆಸುತ್ತಿದ್ದ. ತಾಲ್ವಾಂಡಿ ಪ್ರದೇಶದಲ್ಲಿ ಬಾಡಿಗೆ ಮನೆ ಪಡೆದು ತನ್ನ ಕುಟುಂಬಸ್ಥರೊಂದಿಗೆ ವಾಸಿಸುತ್ತಿದ್ದ. ಕಾಸ್ಲೆ ಪೋಷಕರು ಮಹಾರಾಷ್ಟ್ರದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ವಿದ್ಯಾರ್ಥಿ ಕಾಸ್ಲೆ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ್ದರಿಂದ ಅವನ ಆತ್ಮಹತ್ಯೆಗೆ ಕಾರಣವಾಗಿರಬಹುದು. ಬರೆದ ಕೊನೆಯ ಪರೀಕ್ಷೆಯಲ್ಲಿ ಕಾಸ್ಲೆ 575 ಕ್ಕೆ 288 ಅಂಕಗಳನ್ನು ಗಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರದ ವಿದ್ಯಾರ್ಥಿ ಆತ್ಮಹತ್ಯೆ: ಬಿಹಾರದ ರೋಹ್ತಾಸ್ ಜಿಲ್ಲೆಯ ನಿವಾಸಿಯಾದ ಆದರ್ಶ್ ರಾಜ್, ಕಳೆದ ಒಂದು ವರ್ಷದಿಂದ ಕೋಟಾದ ಕೋಚಿಂಗ್ ಸೆಂಟರ್‌ನಲ್ಲಿ NEET ಯುಜಿಗೆ ತಯಾರಿ ನಡೆಸುತ್ತಿದ್ದ. ಆತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ತನ್ನ ಸಹೋದರಿ ಮತ್ತು ಸೋದರ ಸಂಬಂಧಿಯೊಂದಿಗೆ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದ. ವಿದ್ಯಾರ್ಥಿಯ ಕೊಠಡಿಯಿಂದ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
22 ವಿದ್ಯಾರ್ಥಿಗಳು ಆತ್ಮಹತ್ಯೆ: ಕೋಟಾ ನಗರ ಎಎಸ್ಪಿ ಭಗವತ್ ಸಿಂಗ್ ಹಿಂಗಡ್ ಮಾತನಾಡಿ, ಆದರ್ಶ್ ಸಾಮಾನ್ಯ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸುತ್ತಿರುವುದು ಬೆಳಕಿಗೆ ಬಂದಿದೆ. ಇಬ್ಬರ ಶವಗಳ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ ಎಂದು ತಿಳಿಸಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಈ ತಿಂಗಳು ಕೋಟಾದಲ್ಲಿ ಆರು ವಿದ್ಯಾರ್ಥಿಗಳು ಮತ್ತು ಈ ವರ್ಷ ಕೋಟಾದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಗಳ ಸಂಖ್ಯೆ 22 ಕ್ಕೆ ಏರಿದಂತಾಗಿದೆ ಎಂದರು.
ಮುಂದಿನ 2 ತಿಂಗಳು ಯಾವುದೇ ಪರೀಕ್ಷೆ ನಡೆಸುವಂತಿಲ್ಲ: ಭಾನುವಾರ ಎಲ್ಲ ವಿದ್ಯಾರ್ಥಿಗಳಿಗೆ ರಜೆ ನೀಡುವಂತೆ ಜಿಲ್ಲಾಧಿಕಾರಿ ಒಪಿ ಬಂಕರ್ ಅವರು ಸೂಚಿಸಿದ್ದರೂ ಸಹ ಇನ್ನೂ ಕೆಲ ಕೋಚಿಂಗ್ ಸಂಸ್ಥೆಗಳು ಪರೀಕ್ಷೆ ನಡೆಸಿವೆ ಎಂಬ ಆರೋಪ ಕೇಳಿ ಬಂದಿದೆ. ಮುಂದಿನ ಎರಡು ತಿಂಗಳವರೆಗೆ ಕೋಚಿಂಗ್ ಸೆಂಟರ್ಗಳು ಯಾವುದೇ ರೀತಿಯ ಪರೀಕ್ಷೆಯನ್ನು ತೆಗೆದುಕೊಳ್ಳಬಾರದೆಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಕೆಲ ವಿದ್ಯಾರ್ಥಿಗಳು ಪರೀಕ್ಷೆಯ ನಂತರವೇ ಒತ್ತಡಕ್ಕೆ ಒಳಗಾಗುತ್ತಾರೆ. ನಂತರ ಆತ್ಮಹತ್ಯೆ ಪ್ರಯತ್ನಗಳು ಅಥವಾ ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತವೆ. ಇವತ್ತಿಗೂ ಪರೀಕ್ಷೆ ಬರೆದ ನಂತರವೇ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬಯಲಿಗೆ ಬಂದಿದೆ ಎಂದು ಡಿಸಿ ಹೇಳಿದ್ದಾರೆ.