ಲಖನೌ (ಉತ್ತರ ಪ್ರದೇಶ): ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದ ನಾಯಕ, ಸಂಸದ ಅಫ್ಜಲ್ ಅನ್ಸಾರಿ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಬಿಗ್ ರಿಲೀಫ್ ನೀಡಿದೆ. 2007ರ ಗ್ಯಾಂಗ್ಸ್ಟರ್ ಪ್ರಕರಣದಲ್ಲಿ ಅಫ್ಜಲ್ ಅನ್ಸಾರಿ ಶಿಕ್ಷೆಯನ್ನು ನ್ಯಾಯಾಲಯವು ಷರತ್ತುಬದ್ಧವಾಗಿ ಅಮಾನತುಗೊಳಿಸಿದೆ. ಇದರಿಂದ ಅವರು ಸಂಸತ್ ಸದಸ್ಯತ್ವವನ್ನು ಈಗ ಮರುಸ್ಥಾಪನೆಯಾಗಿದ್ದು, ಪ್ರಸ್ತುತ ಚಳಿಗಾಲದ ಅಧಿವೇಶನದಲ್ಲಿ ಅವರು ಭಾಗವಹಿಸುವ ನಿರೀಕ್ಷೆ ಇದೆ.
ಗ್ಯಾಂಗ್ಸ್ಟರ್ ಪ್ರಕರಣದಲ್ಲಿ ಬಿಎಸ್‌ಪಿ ಸಂಸದ ಅಫ್ಜಲ್ ಅನ್ಸಾರಿ ಅವರಿಗೆ ಗಾಜಿಪುರದ ಎಂಪಿ/ಎಂಎಲ್‌ಎ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಶಿಕ್ಷೆಗೆ ಗುರಿಯಾದ ನಂತರ ಅವರ ಸಂಸತ್ ಸದಸ್ಯತ್ವ ರದ್ದುಗೊಳಿಸಲಾಗಿತ್ತು. ಇದೀಗ ಗುರುವಾರ ಸುಪ್ರೀಂ ಕೋರ್ಟ್ ಈ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದೇ ವೇಳೆ, ಷರತ್ತುಬದ್ಧವಾಗಿ ಅವರು ಸಂಸತ್ ಸದಸ್ಯತ್ವ ಮರುಸ್ಥಾಪಿಸಲು ಆದೇಶ ನೀಡಿದೆ. ಇದರ ಪ್ರಕಾರ, ಸದನದ ಕಲಾಪದಲ್ಲಿ ಅಫ್ಜಲ್ ಭಾಗವಹಿಸಲು ಸಾಧ್ಯವಾಗುತ್ತದೆ. ಆದರೆ, ಲೋಕಸಭೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಯಾವುದೇ ರೀತಿಯ ಭತ್ಯೆಗೆ ಅರ್ಹರಾಗಿರುವುದಿಲ್ಲ. ಗಾಜಿಪುರ ಸಂಸದೀಯ ಸ್ಥಾನಕ್ಕೆ ಉಪಚುನಾವಣೆ ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಇದನ್ನೂ ಓದಿ: ಮಾಜಿ ಶಾಸಕ ಮುಖ್ತಾರ್ ಅನ್ಸಾರಿಗೆ 10 ವರ್ಷ, ಅಫ್ಜಲ್ ಅನ್ಸಾರಿಗೆ 4 ವರ್ಷ ಜೈಲು ಶಿಕ್ಷೆ
ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದೀಪಂಕರ್ ದತ್ತಾ ಮತ್ತು ಉಜ್ವಲ್ ಭುಯಾನ್ ಅವರನ್ನೊಳಗೊಂಡ ಪೀಠ ತನ್ನ ಆದೇಶ ನೀಡಿದೆ. ಇದರಲ್ಲಿ ನ್ಯಾಯಮೂರ್ತಿ ದತ್ತಾ ಮಾತ್ರ ಭಿನ್ನ ನಿರ್ಧಾರವನ್ನು ಪ್ರಕಟಿಸಿದ್ದು, ಅನ್ಸಾರಿ ಮನವಿಯನ್ನು ತಿರಸ್ಕರಿಸಿದ್ದಾಗಿ ಹೇಳಿದರು. ಆದರೆ, ಬಹುಮತದ ತೀರ್ಪು ಸಂಸದ ಅಫ್ಜಲ್ ಅನ್ಸಾರಿ ಪರವಾಗಿ ಬಂದಿದೆ. ಇದೇ ವೇಳೆ, ಅಫ್ಜಲ್ ಅನ್ಸಾರಿ ಶಿಕ್ಷೆಯ ವಿರುದ್ಧದ ಕ್ರಿಮಿನಲ್ ಮೇಲ್ಮನವಿಯನ್ನು ಅಲಹಾಬಾದ್ ಹೈಕೋರ್ಟ್ 2024ರ ಜೂನ್ 30ರೊಳಗೆ ವಿಲೇವಾರಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದಿಂದ 10 ಸಂಸದರು ಗೆದ್ದಿದ್ದರು. ಆದರೆ, ಕೆಲವು ದಿನಗಳ ಹಿಂದೆ, ಎಂಪಿ/ಎಂಎಲ್ಎ ಕೋರ್ಟ್ ಅಫ್ಜಲ್ ಅನ್ಸಾರಿ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಅವರ ಸಂಸತ್ ಸದಸ್ಯತ್ವ ರದ್ದುಗೊಳಿಸಲಾಗಿತ್ತು. ಇದರಿಂದ ಲೋಕಸಭೆಯಲ್ಲಿ ಬಿಎಸ್‌ಪಿ ಸದಸ್ಯರ ಸಂಖ್ಯೆ 9ಕ್ಕೆ ಇಳಿದಿತ್ತು. ಅಲ್ಲದೇ, ಇತ್ತೀಚೆಗಷ್ಟೇ ಅಮ್ರೋಹಾ ಸಂಸದ ಡ್ಯಾನಿಶ್ ಅಲಿ ಅವರನ್ನು ಪಕ್ಷದ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಇದೀಗ ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಅಫ್ಜಲ್ ಅನ್ಸಾರಿ ಸಂಸತ್ತಿನ ಸದಸ್ಯತ್ವ ಮರುಸ್ಥಾಪನೆಯಾಗಲಿದ್ದು, ಸದನದಲ್ಲಿ ಬಿಎಸ್‌ಪಿ ಸದಸ್ಯರ ಸಂಖ್ಯೆ ಯಥಾಸ್ಥಿತಿ ಇರಲಿದೆ.
ಇದನ್ನೂ ಓದಿ: ಬಿಎಸ್‌ಪಿಯಿಂದ ಡ್ಯಾನಿಶ್ ಅಲಿ ಅಮಾನತು: ಮಾಯಾವತಿಗೆ ಧನ್ಯವಾದ ಸಲ್ಲಿಸಿದ ಸಂಸದ