ಹೈದರಾಬಾದ್: ಪ್ರತ್ಯೇಕವಾಗಿ ಆರು ಜನ ಮೃತಪಟ್ಟ ಘಟನೆ ಹೈದರಾಬಾದ್ ನಗರದಲ್ಲಿ ಇಂದು ಬೆಳಕಿಗೆ ಬಂದಿದೆ. ಬೋಯಿನಪಲ್ಲಿಯಲ್ಲಿ ನಸುಕಿನ ವೇಳೆ ವ್ಯಕ್ತಿಯೊಬ್ಬ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮತ್ತೊಂದು ಪ್ರಕರಣದಲ್ಲಿ, ಬೋರಬಂಡಾ ಎಂಬಲ್ಲಿ ಮಹಿಳೆ ತನ್ನ ಇಬ್ಬರು ಗಂಡು ಮಕ್ಕಳನ್ನು ಕೊಂದು ತಾನೂ ಸಾವಿನ ಕದ ತಟ್ಟಿದ್ದಾರೆ.
ಘಟನೆ-1: ಕೌಟುಂಬಿಕ ಕಲಹದಿಂದ ಸಿಕಂದರಾಬಾದ್‌ನ ಬೋಯಿನಪಲ್ಲಿಯ ಭವಾನಿನಗರ ಕಾಲೋನಿಯ ಶ್ರೀಕಾಂತ್ ಚಾರಿ (42) ಎಂಬಾತ 8 ಹಾಗೂ 7 ವರ್ಷದ ಇಬ್ಬರು ಮಕ್ಕಳನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ರಾತ್ರಿ ಕುಟುಂಬದವರೆಲ್ಲ ಸೇರಿ ಊಟ ಮಾಡಿ ಒಟ್ಟಿಗೆ ಮಲಗಿದ್ದರು. ಬೆಳಗ್ಗೆದ್ದು ನೋಡಿದಾಗ ಮಕ್ಕಳೊಂದಿಗೆ ಶ್ರೀಕಾಂತ್ ಶವವಾಗಿದ್ದರು.
"ಎಂದಿನಂತೆ ನಾವು ಮೇಲೆ ಹೋಗಿ ಮಲಗಿದೆವು, ನಂತರ ಏನಾಯಿತು ಎಂದು ನನಗೆ ತಿಳಿದಿಲ್ಲ. ಬೆಳಗ್ಗೆದ್ದಾಗ ನನ್ನ ಗಂಡ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹಿರಿಯ ಮಗುವಿನ ಮೃತದೇಹ ವಾಶ್ ರೂಂನಲ್ಲಿತ್ತು. ಕಿರಿಯ ಮಗುವಿನ ಮೃತದೇಹ ಮತ್ತು ಪತಿಯ ಮೃತದೇಹ ಕೋಣೆಯಲ್ಲಿತ್ತು. ಎಚ್ಚರಿಸಲು ಪ್ರಯತ್ನಪಟ್ಟೆ. ಆದರೆ, ಅವರಾರೂ ಏಳಲಿಲ್ಲ. ಭಯದಿಂದ ನಾನೇ ಮನೆಯವರನ್ನು ಕರೆದು ತಿಳಿಸಿದೆ" ಎಂದು ಪತ್ನಿ ಅಕ್ಷಯಾ ಹೇಳಿದರು.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಬೋಯಿನಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆಳ್ಳಿ ವ್ಯಾಪಾರ ಮಾಡುತ್ತಿದ್ದ ಶ್ರೀಕಾಂತಾಚಾರಿ ಕಳೆದ 10 ವರ್ಷಗಳ ಹಿಂದೆ ಭೂದಾನಪೋಚಂಪಲ್ಲಿ ನಿವಾಸಿ ಅಕ್ಷಯಾ ಅವರನ್ನು ವಿವಾಹವಾಗಿದ್ದರು. ಕೌಟುಂಬಿಕ ಕಲಹ ಮತ್ತು ಹಣಕಾಸಿನ ವ್ಯವಹಾರ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನೆ-2: ಬೋರಬಂಡಾ ಎಂಬಲ್ಲಿನ ರಾಜನಗರದ ನಿವಾಸಿ ಜ್ಯೋತಿ (31) ಎಂಬ ಮಹಿಳೆ ತನ್ನ ಇಬ್ಬರು ಗಂಡು ಮಕ್ಕಳನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೂ ಕೂಡ ಕೌಟುಂಬಿಕ ಕಲಹದಿಂದ ನಡೆದಿರುವ ಘಟನೆ ಎಂದು ಶಂಕಿಸಲಾಗಿದೆ. ಜ್ಯೋತಿ ಬಂಜಾರ ಹಿಲ್ಸ್‌ನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಪತಿ ವಿಜಯ್ ಸೆಂಟ್ರಿಂಗ್ ಗುತ್ತಿಗೆದಾರರಾಗಿದ್ದರು.
"ಇಂದು ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಜ್ಯೋತಿ 4 ಹಾಗೂ 2 ವರ್ಷದ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ" ಎಂದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೋರಬಂಡಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ.. ಐವರು ಕೂಲಿಕಾರ್ಮಿಕರ ಸಾವು, 11 ಜನರಿಗೆ ಗಾಯ