ಹಲ್ದ್ವಾನಿ (ಉತ್ತರಾಖಂಡ): ಆರೋಗ್ಯ ತಪಾಸಣೆ ವೇಳೆ ಜೈಲು ಕೈದಿಗಳಲ್ಲಿ ಎಚ್ಐವಿ ಸೋಂಕು ಪತ್ತೆಯಾಗಿರುವ ಘಟನೆ ಕುಮಾವೂನ್‌ನ ಹಲ್ದ್ವಾನಿ ಜೈಲಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಸುಮಾರು 40 ಜನ ಕೈದಿಗಳಿಲ್ಲಿ ಸೋಂಕು ಪತ್ತೆಯಾಗಿದ್ದು, ಇದರಲ್ಲಿ ಮಹಿಳಾ ಕೈದಿಯೂ ಸೇರಿದ್ದಾರೆ ಎನ್ನಲಾಗಿದೆ. ಎಲ್ಲ ಎಚ್‌ಐವಿ ಸೋಂಕಿತ ಕೈದಿಗಳಿಗೆ ಇಲ್ಲಿಯ ಸುಶೀಲಾ ತಿವಾರಿ ಆಸ್ಪತ್ರೆಯ ಎಆರ್‌ಟಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಲ್ದ್ವಾನಿ ಜೈಲು ಸಾಮರ್ಥ್ಯಕ್ಕಿಂತ ಹೆಚ್ಚು ಕೈದಿಗಳನ್ನು ಹೊಂದಿದೆ. ಪ್ರಸ್ತುತ ಈ ಜೈಲಿನಲ್ಲಿ 1,629 ಪುರುಷರು ಮತ್ತು 70 ಮಹಿಳಾ ಕೈದಿಗಳಿದ್ದಾರೆ. ಆರೋಗ್ಯ ತಪಾಸಣೆ ವೇಳೆ 40 ಕೈದಿಗಳಲ್ಲಿ ಎಚ್ಐವಿ ಸೋಂಕು ಪತ್ತೆಯಾದ ಹಿನ್ನೆಲೆ ಉಳಿದ ಕೈದಿಗಳಿಗೂ ಹೆಚ್‌ಐವಿ ಪರೀಕ್ಷೆಯನ್ನ ಆಡಳಿತ ಮಂಡಳಿ ಕೈಗೊಂಡಿದ್ದು, ಸಾಮಾನ್ಯ ಪರೀಕ್ಷೆಯನ್ನು ಸಹ ನಡೆಸುತ್ತಿದೆ. ಅಷ್ಟೇ ಏಕೆ ಎಚ್‌ಐವಿ ಸೋಂಕಿತ ಕೈದಿಗಳ ಪತ್ತೆಹಚ್ಚಿ ಸಕಾಲದಲ್ಲಿ ಚಿಕಿತ್ಸೆ ನೀಡಲು ಮುಂದಾಗಿದೆ.
ಸೋಂಕಿತರಿಗಾಗಿ ಎಆರ್‌ಟಿ ಕೇಂದ್ರ ನಿರ್ಮಾಣ: ಸುಶೀಲಾ ತಿವಾರಿ ಆಸ್ಪತ್ರೆಯ ವೈದ್ಯ ಡಾ.ಅರುಣ್ ಜೋಶಿ ಮಾತನಾಡಿ, ’’ಎಚ್ಐವಿ ರೋಗಿಗಳಿಗಾಗಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಎಆರ್‌ಟಿ ಕೇಂದ್ರ ಸ್ಥಾಪಿಸಲಾಗಿದ್ದು, ಅಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ಪತ್ತೆಯಾಗಿರುವ ಸೋಂಕಿತ ಕೈದಿಗಳು ಮಾದಕ ವ್ಯಸನಿಗಳಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಎಚ್ಐವಿ ಸೋಂಕಿತರು ಕಂಡುಬಂದಲ್ಲಿ ಉಚಿತವಾಗಿ ಚಿಕಿತ್ಸೆ ಮತ್ತು ಔಷಧಗಳನ್ನು ನೀಡಲಾಗುತ್ತದೆ. ಎಚ್‌ಐವಿ ಸೋಂಕಿತರ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಎಚ್ಐವಿ ಸೋಂಕಿತರು ಇತರ ಕೈದಿಗಳಿಗೆ ಸೋಂಕು ಹರಡದಂತೆ ಎಚ್ಚರಿಕೆ ಮತ್ತು ಜಾಗೃತಿ ವಹಿಸುವುದು ಬಹಳ ಮುಖ್ಯವಾಗಿದೆ’’ ಎಂದರು.
ಕೈದಿಗಳಿಗೆ ಎಚ್ಐವಿ ಜಾಗೃತಿ ಅಭಿಯಾನ: ’’ಸುಶೀಲಾ ತಿವಾರಿ ಆಸ್ಪತ್ರೆಯ ಎಆರ್‌ಟಿ ಕೇಂದ್ರದಲ್ಲಿ ಎಲ್ಲ ಕೈದಿಗಳಿಗೂ ಹೆಚ್‌ಐವಿ ಪರೀಕ್ಷೆ ಮತ್ತು ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಇನ್ನು ಸೋಂಕು ಹರಡುವುದು ತಪ್ಪಿಸಲು, ಕೈದಿಗಳಲ್ಲಿ ಜಾಗೃತಿ ಅಭಿಯಾನವನ್ನು ನಡೆಸಲಾಗುತ್ತಿದೆ. ಮತ್ತು ಸುರಕ್ಷತೆ ಬಗ್ಗೆ ಮಾಹಿತಿ ರವಾನಿಸಲಾಗುತ್ತಿದೆ. ಈಗಾಗಲೇ ಜೈಲಿನಲ್ಲಿ 40 ಎಚ್‌ಐವಿ ಸೋಂಕಿತರು ಪತ್ತೆಯಾಗಿದ್ದಾರೆ. ಇದರಲ್ಲಿ ಒಬ್ಬ ಮಹಿಳಾ ಕೈದಿಯೂ ಸೇರಿದ್ದಾರೆ. ಎಚ್ಐವಿ ಸೋಂಕಿತರಿಗಾಗಿ ಕಾಲಕಾಲಕ್ಕೆ ಶಿಬಿರಗಳನ್ನೂ ಆಯೋಜಿಸಲಾಗುತ್ತದೆ’’ ಎಂದು ಹಲ್ದ್ವಾನಿ ಜೈಲಿನ ಅಧೀಕ್ಷಕ ಪ್ರಮೋದ್ ಪಾಂಡೆ ಹೇಳಿದ್ದಾರೆ.
ಇದನ್ನೂ ಓದಿ: ಅಸ್ಸಾಂನಲ್ಲಿ 25 ಸಾವಿರ ಜನ ಏಡ್ಸ್ ಪೀಡಿತರು
ವೈದ್ಯಕೀಯ ವರದಿ ಪ್ರಕಾರ, ಫೆಬ್ರವರಿ ತಿಂಗಳಲ್ಲಿ 23 ಕೈದಿಗಳಲ್ಲಿ ಎಚ್ಐವಿ ಸೋಂಕು ಪತ್ತೆಯಾಗಿದ್ದರೆ, ಮಾರ್ಚ್‌ನಲ್ಲಿ 17 ಜನರಲ್ಲಿ ಎಚ್‌ಐವಿ ಕಾಣಿಸಿಕೊಂಡಿತ್ತು. ಕೈದಿಗಳಲ್ಲಿ ಎಚ್ಐವಿ ಸೋಂಕು ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಜೈಲಿನಲ್ಲಿ ಇಂತಹ ಘಟನೆಗಳು ನಡೆದಿರುವುದು ವರದಿಯಾಗಿವೆ.
ಇದನ್ನೂ ಓದಿ: 'ಡಿಎನ್ಎ ಓರಿಗ್ಯಾಮಿ' ತಂತ್ರಜ್ಞಾನದಿಂದ ಎಚ್ಐವಿ ವ್ಯಾಕ್ಸಿನ್?
ಇದನ್ನೂ ಓದಿ: ಉತ್ತರಪ್ರದೇಶದ ಜೈಲಿನ 23 ಕೈದಿಗಳಿಗೆ ಹೆಚ್‌ಐವಿ ಸೋಂಕು