ಇಡೀ ದೇಶವೇ ಕ್ರಾಂತಿಯ ಕಿಚ್ಚಿನಿಂದ ಹೋರಾಡುತ್ತಿದ್ದ ಕಾಲವದು. ಹೋರಾಟದ ಹಾದಿ, ರೀತಿ ಬೇರೆ ಬೇರೆಯಾಗಿದ್ದರೂ ಎಲ್ಲರದ್ದೂ ಒಂದೇ ಬೇಡಿಕೆ, ಅದು ಸ್ವಾತಂತ್ರ್ಯ. ಪ್ರಾಣವನ್ನೇ ಮುಡುಪಿಟ್ಟು ತಾಯ್ನಾಡಿಗಾಗಿ ಹೋರಾಡಿದ ವೀರರಲ್ಲಿ ಒಬ್ಬರು ರಾಮ್ ಮೊಹಮ್ಮದ್ ಸಿಂಗ್ ಆಜಾದ್.
ಕ್ರೂರ ಬ್ರಿಟಿಷರ ಆಡಳಿತದಿಂದ ದೇಶದ ರಕ್ಷಣೆ ಮಾಡುವುದೊಂದೇ ರಾಮ್ ಮೊಹಮ್ಮದ್ ಸಿಂಗ್ ಆಜಾದ್ಅವರ ಗುರಿಯಾಗಿತ್ತು. ಹೆಸರಿನಲ್ಲಿಯೇ ರಾಷ್ಟ್ರೀಯ ಐಕ್ಯತೆಯ ಸಂದೇಶ ಸಾರಿದ ಮಹನೀಯರು.
ಕ್ರಾಂತಿಕಾರಿಯನ್ನು ನೇಣಿಗೇರಿಸಿದ ಆಂಗ್ಲರು : ಒಡೆದು ಆಳುವ ನೀತಿಯಲ್ಲಿ ಪರಿಣಿತಿ ಹೊಂದಿದ್ದ ಪರಂಗಿಗಳಿಗೆ ಮೊದಲು ಈ ವ್ಯಕ್ತಿಯನ್ನು ಕೊಲ್ಲಬೇಕೋ ಅಥವಾ ಅವನ ಹೆಸರನ್ನು ಕೊಲ್ಲಬೇಕೋ ಎಂದು ನಿರ್ಧರಿಸಲು ಸಾಧ್ಯವಾಗಲಿಲ್ಲ. ಒಂದು ವೇಳೆ ಹೆಸರನ್ನು ಕೊಲ್ಲದಿದ್ದರೆ ಅದು ಅವರ ಒಡೆದಾಳುವ ಕುತಂತ್ರಕ್ಕೆ ವಿರುದ್ಧವಾಗಿತ್ತು.
ಅದಕ್ಕಾಗಿಯೇ ಬ್ರಿಟಿಷರು ಮೊದಲು ಈ ಹೆಸರನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದರು ಮತ್ತು ನಂತರ ಕ್ರಾಂತಿಕಾರಿಯನ್ನು ನೇಣಿಗೇರಿಸಿದರು. ರಾಮ್ ಮೊಹಮ್ಮದ್ ಸಿಂಗ್ ಆಜಾದ್- ಈ ಹೆಸರು ಪ್ರದೇಶದ ಮೂರು ಪ್ರಮುಖ ಧರ್ಮಗಳ ಏಕತೆಯನ್ನು ಸೂಚಿಸುತ್ತದೆ. ರಾಮ್ಎಂಬುದು ಹಿಂದೂ, ಮೊಹಮ್ಮದ್ ಎಂಬುದು ಮುಸ್ಲಿಂ, ಸಿಂಗ್ ಎಂಬುದು ಸಿಖ್ ಧರ್ಮವನ್ನು ಪ್ರತಿಪಾದಿಸಿದರೆ, ಆಜಾದ್ ಎಂಬುದು ಸ್ವಾತಂತ್ರ್ಯದ ಕಿಚ್ಚಿನಂತೆ ಪರಕೀಯರ ಕಣ್ಣುಕುಕ್ಕುತ್ತಿತ್ತು.
ಮೈಕೆಲ್ ಓ'ಡ್ವೈರ್ ಮೇಲೆ ಗುಂಡು ಹಾರಿಸಿದ ವೀರ : ಬ್ರಿಟಿಷರಿಗೆ ರಾಮ್ ಮೊಹಮ್ಮದ್ ಸಿಂಗ್ ಆಜಾದ್ ಎಂಬ ಹೆಸರು ಸಿಂಹ ಸ್ವಪ್ನವಾಗಿತ್ತು. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸೇಡು ತೀರಿಸಿಕೊಳ್ಳಲು 1940ರಲ್ಲಿ ರಾಮ್ ಮೊಹಮ್ಮದ್ ಸಿಂಗ್ ಆಜಾದ್ ಅವರು ಲಂಡನ್‌ನ ಕ್ಯಾಕ್ಸ್‌ಟನ್ ಹಾಲ್‌ನಲ್ಲಿ ಮೈಕೆಲ್ ಓ'ಡ್ವೈರ್‌ಗೆ (Michael O'Dwyer) ಬಹಿರಂಗವಾಗಿ ಗುಂಡು ಹಾರಿಸಿದರು. ರಾಮ್ ಮೊಹಮ್ಮದ್ ಸಿಂಗ್ ಆಜಾದ್ ಡಿಸೆಂಬರ್ 26, 1899 ರಂದು ಸಂಗ್ರೂರಿನ ಸುನಮ್‌ನಲ್ಲಿ ಜನಿಸಿದರು. ಅವರ ಬಾಲ್ಯದ ಹೆಸರು ಶೇರ್ ಸಿಂಗ್.
ಜಲಿಯನ್ ವಾಲಾಬಾಗ್‌ನ ರಕ್ತಸಿಕ್ತ ಹತ್ಯಾಕಾಂಡ ಕಂಡಿದ್ದರು : ಅಮೃತಸರ ಅನಾಥಾಶ್ರಮದಲ್ಲಿ ಅವರು ಉಧಮ್ ಸಿಂಗ್ ಎಂಬ ಹೆಸರನ್ನು ಪಡೆದರು. 17ನೇ ವಯಸ್ಸಿನಲ್ಲಿ ಅವರ ಸಹೋದರ ಸಾಧು ಸಿಂಗ್ ಸಹ ನಿಧನರಾದರು. ಉಧಮ್ ಸಿಂಗ್ ಅವರು 19 ವರ್ಷ ವಯಸ್ಸಿನವರಾಗಿದ್ದಾಗ ಅವರು ಬ್ರಿಟಿಷ್ ಸರ್ಕಾರದ ಕ್ರೌರ್ಯವನ್ನು ನೋಡಿದರು ಮತ್ತು ಜಲಿಯನ್ ವಾಲಾಬಾಗ್‌ನ ರಕ್ತಸಿಕ್ತ ಹತ್ಯಾಕಾಂಡ ಕಂಡರು.
ಉಧಮ್ ಸಿಂಗ್ ಜಲ್ಸಾದಲ್ಲಿ ನೀರು ನೀಡುತ್ತಿದ್ದಾಗ ಇದ್ದಕ್ಕಿದ್ದಂತೆ ಗುಂಡುಗಳ ಸುರಿಮಳೆ ಪ್ರಾರಂಭವಾಯಿತು. ಆ ಕ್ಷಣದಲ್ಲಿ ಮರದ ಹಿಂದೆ ಅಡಗಿಕೊಂಡರು. ಅಂತಹ ಕ್ರೂರತೆಯನ್ನು ನೋಡಿ ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಳ್ಳಲು ಉಧಮ್ ಸಿಂಗ್ ಪಣತೊಟ್ಟರು. ಲಂಡನ್ಗೆ ತೆರಳಿದ ಉಧಮ್ ಸಿಂಗ್ ಅಲ್ಲಿ ಕೆಲಸ ಮಾಡುತ್ತಿರುವಾಗ, ತಾವು ಅಲ್ಲಿಗೆ ಬಂದ ನಿಜವಾದ ಉದ್ದೇಶವನ್ನು ಮರೆಯಲಿಲ್ಲ ಮತ್ತು ಮೈಕೆಲ್ ಓ'ಡ್ವೈರ್ ಅನ್ನು ಹುಡುಕುತ್ತಲೇ ಇದ್ದರು.
ಐದು ವರ್ಷಗಳ ಕಾಲ ಜೈಲು ವಾಸ : ಅವರು 1927ರಲ್ಲಿ ಭಗತ್ ಸಿಂಗ್ ಅವರ ಆದೇಶದಂತೆ ಪಂಜಾಬ್ಗೆ ಮರಳಿದರು. ಶಸ್ತ್ರಾಸ್ತ್ರ ಕಾಯಿದೆಯಡಿ 'ಗದರ್ ದಿ ಗೂಂಜ್' ಕರಪತ್ರಗಳನ್ನು ಹಂಚಿದ್ದಕ್ಕಾಗಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿದ್ದಕ್ಕಾಗಿ ಮುಲ್ತಾನ್‌ನಲ್ಲಿ ಅವರನ್ನು ಬಂಧಿಸಲಾಯಿತು. 1931ರವರೆಗೆ ಐದು ವರ್ಷಗಳ ಕಾಲ ಅವರು ಜೈಲಿನಲ್ಲಿದ್ದರು. ಆದರೆ, ಬಿಡುಗಡೆಯಾದ ನಂತರ ಅವರು ಬ್ರಿಟಿಷ್ ಪೊಲೀಸರ ನಿಗಾದಲ್ಲಿದ್ದರು. ಬಳಿಕ ಕಾಶ್ಮೀರಕ್ಕೆ ಹೋಗುವ ಮೂಲಕ ಅವರು ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಮತ್ತು 1934 ರಲ್ಲಿ ಇಂಗ್ಲೆಂಡ್ ತಲುಪಿದರು.
ಒಂದು ದಿನ ಅವರು 13 ಮಾರ್ಚ್,1940 ರಂದು ಕ್ಯಾಕ್ಸ್‌ಟನ್ ಹಾಲ್‌ನಲ್ಲಿ ಈಸ್ಟ್ ಇಂಡಿಯಾ ಅಸೋಸಿಯೇಷನ್‌ನ ಸಮಾರಂಭದಲ್ಲಿ ಮೈಕೆಲ್ ಓ'ಡ್ವೈರ್ ಭಾಷಣ ಮಾಡುತ್ತಾರೆ ಎಂದು ಉಲ್ಲೇಖಿಸುವ ಪೋಸ್ಟರ್ ಅನ್ನು ನೋಡಿದರು. ಇದನ್ನು ತಿಳಿದ ಉಧಮ್ ಸಿಂಗ್ ಆತನನ್ನು ಕೊಲ್ಲಲು ಸಿದ್ಧತೆಗಳನ್ನು ಪ್ರಾರಂಭಿಸಿದರು. ಸಮಾರಂಭದ ದಿನ ಕ್ಯಾಕ್ಸ್‌ಟನ್ ಹಾಲ್ ತಲುಪಿದರು. ಮೈಕೆಲ್ ಓ'ಡ್ವೈರ್ ಸ್ಥಳದಲ್ಲೇ ಸಾವನ್ನಪ್ಪಿದರು. ಆದರೆ, ವಿಚಾರಣೆಯ ಸಮಯದಲ್ಲಿ ರಾಮ್ ಮೊಹಮ್ಮದ್ ಸಿಂಗ್ ಆಜಾದ್ ಹೆಸರು ಬಿಳಿಯರನ್ನು ಗೊಂದಲಕ್ಕೊಳಗಾಗುವಂತೆ ಮಾಡಿತು.
ಲಂಡನ್ ಜೈಲಿನಲ್ಲೇ ಗಲ್ಲಿಗೇರಿಸಲಾಯ್ತು : 31 ಜುಲೈ 1940 ರಂದು, ಭಾರತದ ಈ ಮಹಾನ್ ಪುತ್ರನನ್ನು ಲಂಡನ್‌ನ ಪ್ಯಾಟನ್‌ವಿಲ್ಲೆ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಅವರ ದೇಹವನ್ನು ಜೈಲಿನಲ್ಲಿಯೇ ಸಮಾಧಿ ಮಾಡಲಾಯಿತು. ಆಗಿನ ಪಂಜಾಬ್ ಮುಖ್ಯಮಂತ್ರಿ ಗಿಯಾನಿ ಜೈಲ್ ಸಿಂಗ್ ಅವರ ಪ್ರಯತ್ನದಿಂದ ಇಂಗ್ಲೆಂಡ್ 1974ರ ಜುಲೈ 31 ರಂದು ಉಧಮ್ ಸಿಂಗ್ ಅವರ ಅವಶೇಷಗಳನ್ನು ಭಾರತಕ್ಕೆ ಹಸ್ತಾಂತರಿಸಿತು. ಬ್ರಿಟಿಷ್ ನೆಲದಲ್ಲಿ ಭಾರತದ ಸ್ವಾತಂತ್ರ್ಯದ ಧ್ವಜವನ್ನು ಹಾರಿಸಿದ ಶಹೀದ್ ಉಧಮ್ ಸಿಂಗ್‌ರ ಶೌರ್ಯ ಸಾಹಸ ಎಂದೆಂದಿಗೂ ಅಜರಾಮರ.