ಹೈದರಾಬಾದ್ (ತೆಲಂಗಾಣ): ಹಣಕ್ಕಾಗಿ ಒಂದೇ ವಾರದಲ್ಲಿ ಮೂವರನ್ನು ಕೊಲೆ ಮಾಡಿದ್ದ ಸೈಕೋ ಕಿಲ್ಲರ್ನನ್ನು ಹೈದರಾಬಾದ್ ಉಪನಗರ ಮೈಲಾರ್‌ದೇವಪಲ್ಲಿ ಪೊಲೀಸರು ಬಂಧಿಸಿದ್ದಾರೆ. ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರನಗರದ ಮಾಣಿಕ್ಯಮ್ಮ ಕಾಲೋನಿಯ ಬಗರಿ ಪ್ರವೀಣ್ ಬಂಧಿತ ಆರೋಪಿ. ಗಾಂಜಾ ಮತ್ತು ಮದ್ಯದ ಚಟಕ್ಕೆ ದಾಸನಾಗಿದ್ದ ಈತ ಅವುಗಳನ್ನು ಕೊಳ್ಳಲು ಹಣಕ್ಕಾಗಿ ಜನರನ್ನು ಹತ್ಯೆ ಮಾಡುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಡಿಸಿಪಿ ಜಗದೀಶ್ವರ್ ಮಾಹಿತಿ ನೀಡಿದ್ದು, ಈತ ಇತರ ಪ್ರಕರಣಗಳಲ್ಲಿ ಶಾಮೀಲಾಗಿರುವ ಹಳೆಯ ಆರೋಪಿಯಾಗಿದ್ದು, ಮದ್ಯ ಮತ್ತು ಗಾಂಜಾ ಸೇವನೆ ಚಟ ಹೊಂದಿದ್ದಾನೆ. ಅವುಗಳನ್ನು ಕೊಳ್ಳಲು ಹಣಕ್ಕಾಗಿ, ದಿನವಿಡೀ ಭಿಕ್ಷೆ ಬೇಡಿ ರಾತ್ರಿ ರಸ್ತೆ ಬದಿಯಲ್ಲಿ ಮಲುಗುತ್ತಿದ್ದವರನ್ನು ಕೊಂದು ಅವರಲ್ಲಿದ್ದ ಹಣ ಪಡೆದು ಪರಾರಿಯಾಗುತ್ತಿದ್ದ. 14 ದಿನಗಳ ಅವಧಿಯಲ್ಲಿ ಮೂರು ಕೊಲೆಗಳನ್ನು ಮಾಡಿರುವ ಆರೋಪಿ ವಿರುದ್ಧ ಎಂಟು ಕೊಲೆ, ಒಂದು ಅತ್ಯಾಚಾರ ಹಾಗೂ ಐದು ದರೋಡೆ ಪ್ರಕರಣಗಳು ದಾಖಲಾಗಿರುವುದು ತನಿಖೆ ವೇಳೆ ಪತ್ತೆಯಾಗಿದೆ ಎಂದು ಡಿಸಿಪಿ ಜಗದೀಶ್ವರ್ ರೆಡ್ಡಿ ತಿಳಿಸಿದ್ದಾರೆ.
ಸೈಕೋ ಕಿಲ್ಲರ್ಗಿದೆ ಭಯಾನಕ ಇತಿಹಾಸ: ಬಾಲ್ಯದಿಂದಲೇ ಕಳ್ಳತನ ಮಾಡಿಕೊಂಡಿದ್ದ ಪ್ರವೀಣ್, ರಾಜೇಂದ್ರನಗರದ ಶೇಖ್ ಫಯಾಜ್ ಮತ್ತು ದರ್ಗಾ ನರೇಶ್ ಎಂಬುವರೊಂದಿಗೆ ಸೇರಿ ಗ್ಯಾಂಗ್ ಕಟ್ಟಿಕೊಂಡು 2011ರಲ್ಲಿ ರಾಜೇಂದ್ರನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ದರೋಡೆಗೆ ಯೋಜನೆ ರೂಪಿಸಿದ್ದ. ಅದರಂತೆ ಮಧ್ಯರಾತ್ರಿ ಈ ಮೂವರು ಮನೆಗೆ ಹೋಗಿದ್ದರು. ಈ ವೇಳೆ, ಮನೆ ಮಾಲೀಕ ಯಾದಯ್ಯ ಎಂಬುವವರು ಮೂತ್ರ ವಿಸರ್ಜನೆಗೆ ಎಂದು ಮನೆಯಿಂದ ಹೊರ ಬಂದಿರುವುದನ್ನು ಕಂಡು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದರು. ನಂತರ ಅವರ ಪತ್ನಿಯ ಮೇಲೆ ಅತ್ಯಾಚಾರ ಮಾಡಿ ಕತ್ತು ಹಿಸುಕಿ ಕೊಂದಿದ್ದರು. ಬಳಿಕ ಹತ್ತು ವರ್ಷದ ಮಗುವನ್ನು ಸಹ ಸಾಯಿಸಿದ್ದರು. ಇದಾದನಂತರ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ದೋಚಿ ಪರಾರಿಯಾಗಿದ್ದರು. ಮೂರು ಕೊಲೆ ಮಾಡಿದ ಬಳಿಕ ಪ್ರವೀಣ್ ಸ್ಥಳೀಯ ದೇವಸ್ಥಾನವೊಂದಕ್ಕೆ ತೆರಳಿ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿದ್ದ ಎಂಬ ವಿಚಾರವನ್ನೂ ಪೊಲೀಸರು ಪತ್ತೆ ಮಾಡಿರುವುದಾಗಿ ಡಿಜಿಪಿ ತಿಳಿಸಿದ್ದಾರೆ.
ಇನ್ನು ಅದೇ ವರ್ಷ ಒಂದೇ ತಿಂಗಳೊಳಗೆ ಪ್ರವೀಣ್ ಮತ್ತೆರಡು ಕೊಲೆ ಮಾಡಿದ್ದಾನೆ. ರಾಜೇಂದ್ರನಗರದ ಪಿಲ್ಲರ್ ನಂ.127ರ ಬಳಿ ರಸ್ತೆಬದಿಯಲ್ಲಿ ಮಲಗಿದ್ದ ಭಿಕ್ಷುಕ ಹಾಗೂ ಫುಟ್ ಪಾತ್ನಲ್ಲಿ ವಾಸವಿದ್ದ ಬದ್ವೇಲ್ ನಿವಾಸಿ ಪಿ.ಪ್ರಕಾಶ್ ಅವರ ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಹಣದೊಂದಿಗೆ ಪರಾರಿಯಾಗಿದ್ದ. ಇದಷ್ಟೇ ಅಲ್ಲದೇ ಮನೆ ಕಳ್ಳತನ, ದರೋಡೆಗಳನ್ನು ಮಾಡಿದ್ದ. ಜೂನ್ 2014 ರಲ್ಲಿ, ನ್ಯಾಯಾಲಯವು ಎಲ್ಲ ಪ್ರಕರಣಗಳಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಜಾಮೀನಿನ ಮೇಲೆ ಹೊರ ಬಂದಿದ್ದ ಆರೋಪಿ: ಕಳೆದ ನವೆಂಬರ್‌ನಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದ ಪ್ರವೀಣ್, ಅಂದಿನಿಂದ ಮೈಲಾರ್‌ದೇವಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೀವ್ ಗೃಹಕಲ್ಪ ಬಳಿ ವಾಸವಾಗಿದ್ದ. ಇಷ್ಟಾದರೂ ಸುಮ್ಮನಾಗದ ಈತ ಮದ್ಯಪಾನ, ಗಾಂಜಾಕ್ಕೆ ಹಣ ಬೇಕು ಎಂದು ಮತ್ತೆ ಕೊಲೆ ಮಾಡಲು ಆರಂಭಿಸಿದ್ದಾನೆ. ಇದೇ ತಿಂಗಳ 7ರಂದು ಮೈಲಾರದೇವಪಲ್ಲಿಯ ನೇತಾಜಿನಗರ ಪ್ರದೇಶದಲ್ಲಿ ರೈಲು ಹಳಿ ಪಕ್ಕದಲ್ಲಿ ಮಲಗಿದ್ದ ಭಿಕ್ಷುಕನ ತಲೆಗೆ ಕಲ್ಲಿನಿಂದ ಹೊಡೆದು ಹಣ ದೋಚಿ ಪರಾರಿಯಾಗಿದ್ದ.
ಜೂ.21 (ಬುಧವಾರ) ಮಧ್ಯರಾತ್ರಿ ಮೈಲಾರದೇವಪಲ್ಲಿ ಸ್ವಪ್ನಾ ಥಿಯೇಟರ್ ಬಳಿ ಮಲಗಿದ್ದ 40 ವರ್ಷದ ಹಾಸಿಗೆ ಮಾರಾಟಗಾರನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಹಣ ದೋಚಿದ್ದ. ಅಲ್ಲಿಂದ ದುರ್ಗಾನಗರ ಕ್ರಾಸ್ ರಸ್ತೆಗೆ ತೆರಳಿ ಅಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು ವಾಸವಿದ್ದು, ಅಲ್ಲಿಯೂ ವ್ಯಕ್ತಿಯೊಬ್ಬರಿಗೆ ಕಲ್ಲಿನಿಂದ ಹೊಡೆದು ಹಣ ದೋಚಿ ಪರಾರಿಯಾಗಿದ್ದ.
ಆರೋಪಿ ದುಡ್ಡು ಬೇಕು ಎಂದಾಗಲೆಲ್ಲ ಕೊಲೆ ಮಾಡುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಡಿಸಿಪಿ ಜಗದೀಶ್ವರರೆಡ್ಡಿ ವಿವರಿಸಿದರು. ಇದೇ ತಿಂಗಳ 21ರಂದು ಎರಡು ಕೊಲೆ ನಡೆದಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಕೊಲೆ ನಡೆದ ಪ್ರದೇಶದಲ್ಲಿದ್ದ ನೂರು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಶೋಧಿಸಿ ಆರೋಪಿಗಳ ಪತ್ತೆಗೆ ಕ್ರಮಕೈಗೊಂಡು ಬಂಧಿಸಲಾಗಿದೆ. ಕೊಲೆಗಳನ್ನು ಏಕೆ ಮಾಡಿದೆ ಎಂದು ಕೇಳಿದರೆ, 'ನಾನೇ ಕೊಂದಿದ್ದೇನೆ... ಅಷ್ಟೇ. ಏನು ಮಾಡಬೇಕು..! ಅದಕ್ಕೆ ಎಂದು ಆರೋಪಿ ಉತ್ತರಿಸಿದ್ದಾನೆ.
ಇದನ್ನೂ ಓದಿ: ಮೈಸೂರು: 10 ಸಾವಿರ ರೂಪಾಯಿ ಹಣಕ್ಕಾಗಿ ಭಿಕ್ಷುಕಿ ಕೊಲೆ