ಬೆಂಗಳೂರು: ಇಲ್ಲಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ರೈತಸ್ನೇಹಿ ಡ್ರೋನ್‌ಗಳು ಜನರನ್ನು ಆಕರ್ಷಿಸುತ್ತಿವೆ. ಬೆಳೆಗಳಿಗೆ ಔಷಧ ಸಿಂಪಡಿಸುವುದು, ರೋಗ ತಗುಲಿರುವ ಕುರಿತು ಮಾಹಿತಿ ನೀಡುವ, ಹವಾಮಾನ ಬದಲಾವಣೆ ಹಾಗೂ ಭೂಮಿ ಸರ್ವೇ ಮಾಡುವುದೂ ಸೇರಿದಂತೆ ಕೃಷಿ ಸಂಬಂಧಿತ ವಿವಿಧ ಕೆಲಸಗಳಿಗೆ ನೆರವಾಗುವ ಡ್ರೋನ್‌ಗಳು ಗಮನ ಸೆಳೆಯುತ್ತಿವೆ.
ಔಷಧಿ ಸಿಂಪಡಿಸುವ ಡ್ರೋನ್: ಔಷಧಿ ಸಿಂಪಡಿಸುವ ಡ್ರೋನ್ ಈ ಮೊದಲೇ ಲಭ್ಯ ಇದೆ. ಬೆಳೆಗಳಿಗೆ ಔಷಧಿ ಸಿಂಪಡಿಸುವಾಗ ಹೆಚ್ಚು ಗಾಳಿಯಿದ್ದರೆ ಪಕ್ಕದ ಬೆಳೆಗಳಿಗೆ ದೊಡ್ಡ ಮಟ್ಟದ ಹಾನಿ ಉಂಟಾಗುತ್ತದೆ. ಇದನ್ನು ತಡೆಯಲು ಈ ಡ್ರೋನ್ಗಳಲ್ಲಿ ವಿಶೇಷ ತಂತ್ರಾಂಶ ಅಳವಡಿಸಲಾಗಿದೆ. ಜೊತೆಗೆ, ಯಾವ ಬೆಳೆಗೆ ಎಷ್ಟು ಔಷಧ ಸಿಂಪಡಿಸಬೇಕು ಎಂಬ ಮುನ್ಸೂಚನೆಯನ್ನೂ ಇವು ನೀಡುತ್ತವೆ. ಇದಕ್ಕೂ ಸೂಕ್ತ ಪ್ರೋಗ್ರಾಮಿಂಗ್ ಮಾಡಲಾಗಿದೆ. ಇವು 20 ನಿಮಿಷಗಳ ಕಾಲ ಹಾರುವ ಸಾಮರ್ಥ್ಯ ಹೊಂದಿವೆ. ಸುಮಾರು 1500 ಛಾಯಾಚಿತ್ರಗಳನ್ನು ಸೆರೆ ಹಿಡಿದು, ಜಮೀನಿನ ಯಾವ ಭಾಗ ರೋಗಕ್ಕೆ ತುತ್ತಾಗಿದೆ ಎಂಬ ಮಾಹಿತಿಯನ್ನು ರೈತರಿಗೆ ನೀಡುತ್ತದೆ. ಪ್ರಕೃತಿಗೆ ಯಾವುದೇ ರೀತಿ ತೊಂದರೆ ಮಾಡದಂತೆ ಕಾರ್ಯನಿರ್ವಹಿಸಲು ಈ ಡ್ರೋನ್‌ಗಳನ್ನು ತಯಾರಿಸಲಾಗಿದೆ.
ಹವಾಮಾನ ನಿರ್ವಹಣೆ ಡ್ರೋನ್‌ಗಳು ಸುಮಾರು ಮೂರರಿಂದ ನಾಲ್ಕು ನಿಮಿಷಗಳವರೆಗೆ ಹಾರುವ ಸಾಮರ್ಥ್ಯ ಹೊಂದಿವೆ. ಇವು ರೈತರಿಗೆ ವಾತಾವರಣದ ತಾಪಮಾನ, ಗಾಳಿಯ ವೇಗ, ಹವಾಗುಣಗಳಂತಹ ಮಾಹಿತಿ ನೀಡುವ ಮೂಲಕ ರೈತರು ಯಾವ ಕಾಲದಲ್ಲಿ ಯಾವ ರೀತಿಯ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂಬ ಸೂಚನೆ ನೀಡುತ್ತವೆ.
ಮ್ಯಾಪಿಂಗ್ ಡ್ರೋನ್‌ಗಳು ರೈತರ ಜಮೀನಿನ ಸರ್ವೇ ಕಾರ್ಯಗಳಲ್ಲಿ ಸಹಾಯಕ್ಕೆ ನಿಲ್ಲುತ್ತವೆ. ಇದು ಎತ್ತರದ ಮಾದರಿ ಹಾಗೂ ಸಮೀಕ್ಷೆಯ ಮಾದರಿ ಎಂಬ ಎರಡು ವಿಭಾಗದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಭೂಮಿಯ ಎತ್ತರ ಮತ್ತು ತಗ್ಗು ಪ್ರದೇಶಗಳ ವ್ಯತ್ಯಾಸವನ್ನು ಹಾಗೂ ಕಟ್ಟಡಗಳ ರಚನೆ, ರಸ್ತೆಯ ರಚನೆಯ ಸರ್ವೇಗಳಲ್ಲಿ ಸಹ ಬಳಕೆಯಾಗುತ್ತದೆ.
"ರೈತರ ಭೂಮಿ ಸರ್ವೇ ಮಾಡುವ ಡ್ರೋನ್‌ಗಳು ಕೂಡ ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿವೆ. ಹಲವು ಡ್ರೋನ್‌ಗಳು ಬ್ಯಾಟರಿಚಾಲಿತವಾಗಿವೆ. ಕೃಷಿ ಮೇಳದಲ್ಲಿನ ಮಲ್ಟಿ ಸ್ಪೆಕ್ಟ್ರಲ್ ಡ್ರೋನ್ ಬೆಳೆಗಳ ಆರೋಗ್ಯದ ಮಾಪನ ಮಾಡುತ್ತದೆ. ರೈತರ ಬೆಳೆಗಳ ಬಗ್ಗೆ ನಿಗಾ ವಹಿಸಲು ಸಹಕಾರಿಯಾಗಿದೆ. ಇವು ರೈತರಿಗೆ ವಾತಾವರಣದ ತಾಪಮಾನ, ಗಾಳಿಯ ವೇಗ, ಹವಾಗುಣಗಳಂತಹ ಮಾಹಿತಿ ನೀಡುವ ಮೂಲಕ ರೈತರು ಯಾವ ಕಾಲದಲ್ಲಿ ಯಾವ ರೀತಿಯ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂಬ ಸೂಚನೆ ನೀಡುತ್ತದೆ. ಹೆಗ್ಸಗಾನ್ ಎಂಬ ಬ್ರೆಜಿಲ್ ಮೂಲದ ಕಂಪನಿಯ ಡ್ರೋನ್‌ಗಳು ಇವಾಗಿವೆ" ಎಂದು ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್.ವಿ.ಸುರೇಶ್ ಹೇಳಿದ್ದಾರೆ.
ಇದನ್ನೂ ಓದಿ: ಮಧ್ಯವರ್ತಿಗಳ ಕಮಿಷನ್, ಚೌಕಾಶಿಯಿಂದ ರೈತರಿಗೆ ಮುಕ್ತಿ: ಬಿತ್ತನೆ ಬೀಜಗಳು ಆನ್ಲೈನ್ ಮೂಲಕ ಮನೆ ಬಾಗಿಲಿಗೆ!
ಇದನ್ನೂ ಓದಿ: ಕೃಷಿಮೇಳ: ಸಮುದ್ರದಲ್ಲಿ ಮಾತ್ರವಲ್ಲ- ನಿಮ್ಮ ಮನೆಯ ತೊಟ್ಟಿಯಲ್ಲಿ ಮುತ್ತು ಉತ್ಪಾದಿಸಿ, ಲಾಭ ಗಳಿಸಿ