ಲಖನೌ(ಉತ್ತರಪ್ರದೇಶ) : ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಹತರಾದ ರೈತರ 'ಅಂತಿಮ ದರ್ಶನ'ದಲ್ಲಿ ಭಾಗವಹಿಸಲಿದ್ದಾರೆ.
ಈ ಹಿನ್ನೆಲೆ ಲಖನೌ-ಸೀತಾಪುರ-ಲಖಿಂಪುರ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರನ್ನ ಬಿಗಿ ಭದ್ರತೆಗೆ ನಿಯೋಜಿಸಲಾಗಿದೆ. ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ "ಗೋ ಬ್ಯಾಕ್ ರಾಹುಲ್ ಗಾಂಧಿ, ಗೋ ಬ್ಯಾಕ್ ಪ್ರಿಯಾಂಕಾ ಗಾಂಧಿ ವಾದ್ರಾ" ಎಂಬ ಬ್ಯಾನರ್‌ಗಳನ್ನು ಹಾಕಲಾಗಿದೆ.
ಅಕ್ಟೋಬರ್ 3ರಂದು ನಡೆದ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಂಯುಕ್ತ ಕಿಸಾನ್ ಮೋರ್ಚಾ (SKM) 'ಶಹೀದ್ ಕಿಸಾನ್ ದಿವಸ್'ಗೆ ಕರೆ ನೀಡಿದೆ. SKM ಕರೆಯ ಪ್ರಕಾರ, ಅಕ್ಟೋಬರ್ 12 (ಇಂದು) ಭಾರತದಾದ್ಯಂತ ಶಹೀದ್ ಕಿಸಾನ್ ದಿವಸ್ ಆಚರಿಸಲಾಗುತ್ತಿದೆ.
ಉತ್ತರಪ್ರದೇಶದ ಲಖಿಂಪುರ ಜಿಲ್ಲೆ ಕೆಹ್ರಿಯ ಟಿಕೊನಿಯಾ ಗ್ರಾಮದ ಹಿಂಸಾಚಾರ ನಡೆದ ಸ್ಥಳದಿಂದ ದೂರದಲ್ಲಿರುವ ಮೈದಾನದಲ್ಲಿ ಅಂತಿಮ ಪ್ರಾರ್ಥನೆಗೆ ಎಲ್ಲ ರೀತಿಯ ಸಿದ್ಧತೆಗಳು ಮಾಡಿಕೊಳ್ಳಲಾಗುತ್ತಿದೆ.
ಲಖಿಂಪುರ ಖೇರಿ ಹತ್ಯಾಕಾಂಡದಲ್ಲಿ ಹುತಾತ್ಮರಾದ ರೈತರ ಅಂತಿಮ ದರ್ಶನವು ಟಿಕುನಿಯಾದಲ್ಲಿ ಸಾಹೇಬ್ಜಡಾ ಇಂಟರ್ ಕಾಲೇಜಿನಲ್ಲಿ ನಡೆಯಲಿದೆ. ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಿಂದ ರೈತರು ಮತ್ತು ವಿವಿಧ ರೈತ ಸಂಘಟನೆ ನಾಯಕರು ಈ ವೇಳೆ ಭಾಗಿಯಾಗಲಿದ್ದಾರೆ.
ಏನಿದು ಲಖಿಂಪುರ ಖೇರಿ ಘಟನೆ?: ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲಿಗೆ ಯುಪಿ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಭೇಟಿ ನೀಡಬೇಕಿತ್ತು. ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಉಪ ಮುಖ್ಯಮಂತ್ರಿಗೆ ಕಪ್ಪು ಬಾವುಟಗಳನ್ನು ತೋರಿಸಲು ಯೋಜಿಸಿದ್ದರು.
ಈ ವೇಳೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಪ್ರತಿಭಟನಾನಿರತ ರೈತರ ಮೇಲೆ ತನ್ನ ಕಾರು ಚಲಾಯಿಸಿರುವ ಆರೋಪ ಕೇಳಿ ಬಂದಿದೆ. ಪರಿಣಾಮ ಹೋರಾಟಗಾರರು ಬಿಜೆಪಿ ಕಾರ್ಯಕರ್ತರ ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಉರುಳಿಸಿದರು. ಈ ವೇಳೆ ನಾಲ್ವರು ರೈತರು ಸೇರಿ ಒಟ್ಟು 8 ಮಂದಿ ಸಾವನ್ನಪ್ಪಿದ್ದರು.
ಓದಿ: ಲಖಿಂಪುರ್ ಖೇರಿಗೆ ತೆರಳುತ್ತಿದ್ದ ವೇಳೆ ಪ್ರಿಯಾಂಕಾ ಗಾಂಧಿ ಬಂಧನ- ಕಾಂಗ್ರೆಸ್ ಆರೋಪ