ಚೆನ್ನೈ: ಪ್ರಿಯಾಂಕಾ ಗಾಂಧಿ ವಾದ್ರಾ 2008 ರಲ್ಲಿ ಜೈಲಿನಲ್ಲಿ ತಮ್ಮನ್ನು ಭೇಟಿಯಾದಾಗ, ಅವರ ತಂದೆ ರಾಜೀವ್ ಗಾಂಧಿ ಹತ್ಯೆಯ ಬಗ್ಗೆ ಕೇಳಿದ್ದರು ಮತ್ತು ಆಗ ಅವರು ಭಾವುಕರಾಗಿದ್ದರು ಎಂದು ಮಾಜಿ ಪ್ರಧಾನಿಯ ಹತ್ಯೆ ಪ್ರಕರಣದಲ್ಲಿ ಬಿಡುಗಡೆಗೊಂಡಿರುವ ಅಪರಾಧಿಗಳಲ್ಲಿ ಒಬ್ಬರಾದ ನಳಿನಿ ಶ್ರೀಹರನ್ ಭಾನುವಾರ ಇಲ್ಲಿ ಹೇಳಿದರು.
ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಳಿನಿ, ಪ್ರಶ್ನೆಯೊಂದಕ್ಕೆ ಉತ್ತರಿಸಿ- ಈ ವಿಷಯದ ಬಗ್ಗೆ ತನಗೆ ತಿಳಿದಿದ್ದನ್ನು ಪ್ರಿಯಾಂಕಾ ವಾದ್ರಾಗೆ ಹೇಳಿದ್ದೇನೆ ಎಂದರು. ಆಗ ಪ್ರಿಯಾಂಕಾ ಸುಮ್ಮನಿದ್ದರಾ ಅಥವಾ ಭಾವುಕರಾಗಿ ಅತ್ತರಾ ಎಂಬ ಪ್ರಶ್ನೆಗೆ, ಹೌದು, ಅವರು ತುಂಬಾ ಭಾವುಕರಾಗಿದ್ದರು ಎಂದು ಹೇಳಿದರು. ಪ್ರಿಯಾಂಕಾ ಆಗ ನಿಮ್ಮ ಮುಂದೆ ಅತ್ತಿದ್ದರಾ ಎಂದು ಮತ್ತೆ ಕೇಳಿದ್ದಕ್ಕೆ ನಳಿನಿ ಹೌದು ಎಂದುತ್ತರಿಸಿದರು.
1991ರಲ್ಲಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು. ಹತ್ಯೆಯ ಅಪರಾಧಿಗಳಲ್ಲೊಬ್ಬರಾದ ನಳಿನಿ ಅವರನ್ನು ಪ್ರಿಯಾಂಕಾ 2008ರಲ್ಲಿ ತಮಿಳುನಾಡಿನ ವೆಲ್ಲೂರು ಕೇಂದ್ರ ಕಾರಾಗೃಹದಲ್ಲಿ ಭೇಟಿಯಾಗಿದ್ದರು.
ಅಂದು ಪ್ರಿಯಾಂಕಾರೊಂದಿಗೆ ಮತ್ತೇನು ಮಾತನಾಡಿದ್ದೆ ಎಂದು ಹೇಳುವುದಿಲ್ಲ. ಆ ವಿಷಯಗಳು ಪ್ರಿಯಾಂಕಾರ ವೈಯಕ್ತಿಕ ಭಾವನೆಗಳಾಗಿವೆ ಎಂದು ನಳಿನಿ ತಿಳಿಸಿದರು.
ಗಾಂಧಿ ಕುಟುಂಬದವರನ್ನು ಭೇಟಿಯಾಗಲು ನಿಮಗೆ ಹಿಂಜರಿಕೆ ಇತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ನಳಿನಿ, ಅವರು ಬಯಸಿದ್ದರೆ ನಾನು ಭೇಟಿ ಮಾಡುತ್ತಿದ್ದೆ. ಆದರೆ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ತಾವು ಗಾಂಧಿ ಕುಟುಂಬದವರನ್ನು ಭೇಟಿಯಾಗಲು ಹಿಂಜರಿದಿದ್ದು ನಿಜ ಎಂದರು.
ಜೈಲಿನಲ್ಲಿ ಕಳೆದ 30 ವರ್ಷಗಳ ಅನುಭವ ಹೇಗಿತ್ತು ಎಂಬ ಪ್ರಶ್ನೆಗೆ, ಜೈಲೊಂದು ದೊಡ್ಡ ವಿಶ್ವವಿದ್ಯಾಲಯವಿದ್ದಂತೆ. ನಾನಲ್ಲಿ ಹಲವಾರು ವಿಷಯಗಳನ್ನು ಕಲಿತೆ. ಜೈಲಿನ ಜೀವನ ಮತ್ತು ಬಿಡುಗಡೆಗಾಗಿ ನಡೆಸಿದ ಕಾನೂನು ಹೋರಾಟದ ಕುರಿತು ಆತ್ಮಚರಿತ್ರೆ ಅಥವಾ ಪುಸ್ತಕ ಬರೆಯುವ ಯೋಜನೆ ಇದೆಯೇ ಎಂದು ಕೇಳಿದಾಗ, ಲಂಡನ್‌ನಲ್ಲಿರುವ ತನ್ನ ಪತಿ ಶ್ರೀಹರನ್ ಮತ್ತು ಮಗಳೊಂದಿಗೆ ಒಟ್ಟಿಗೆ ವಾಸಿಸುವತ್ತ ಮಾತ್ರ ತನ್ನ ಗಮನ ಎಂದು ಹೇಳಿದರು.
1999 ರಲ್ಲಿ ಸುಪ್ರೀಂ ಕೋರ್ಟ್ ನಳಿನಿ, ಅವರ ಪತಿ ಶ್ರೀಹರನ್ ಮತ್ತು ಇತರ ಇಬ್ಬರಿಗೆ ಮರಣದಂಡನೆ ಶಿಕ್ಷೆಯನ್ನು ದೃಢಪಡಿಸಿತು. ನಳಿನಿಯ ಮರಣದಂಡನೆಯನ್ನು 2000 ರಲ್ಲಿ ತಮಿಳುನಾಡು ಸರ್ಕಾರವು ಜೀವಾವಧಿಗೆ ಪರಿವರ್ತಿಸಿತು. ಸುಪ್ರೀಂ ಕೋರ್ಟ್‌ನ ಆದೇಶದ ನಂತರ ನವೆಂಬರ್ 12 ರಂದು ಬಿಡುಗಡೆಯಾದ ಆರು ಅಪರಾಧಿಗಳಲ್ಲಿ ನಳಿನಿ ಮತ್ತು ಶ್ರೀಹರನ್ ಸೇರಿದ್ದಾರೆ.
ಇದನ್ನೂ ಓದಿ: 'ಗಾಂಧಿ ಕುಟುಂಬ ಆ ದುರಂತದಿಂದ ಹೊರಬರುವ ಭರವಸೆ ಇದೆ, ಭೇಟಿ ಮಾಡುವ ಯೋಚನೆ ಇಲ್ಲ'