ಮಹಬೂಬಾಬಾದ್(ತೆಲಂಗಾಣ): 8 ವರ್ಷದ ಮಗಳೊಂದಿಗೆ ಮಾರ್ಕೆಟ್ಗೆ ತೆರಳಿ ದ್ವಿಚಕ್ರ ವಾಹನದ ಮೇಲೆ ವಾಪಸ್ ಬರುತ್ತಿದ್ದ ವೇಳೆ ವ್ಯಕ್ತಿಯೊಬ್ಬರನ್ನು ತಡೆದಿರುವ ಪೊಲೀಸರು ಹೆಲ್ಮೆಟ್ ಹಾಕಿಲ್ಲ ಎಂಬ ಕಾರಣಕ್ಕಾಗಿ ಥಳಿಸಿದ್ದಾರೆ. ಈ ವೇಳೆ 'ನನ್ನ ತಂದೆಗೆ ಹೊಡಿಬೇಡಿ' ಎಂದು ಮಗಳು ಕಣ್ಣೀರು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ತೆಲಂಗಾಣದ ಮೆಹಬೂಬಾಬಾದ್ನಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಶ್ರೀನಿವಾಸ್ ತಮ್ಮ ಮಗಳೊಂದಿಗೆ ತರಕಾರಿ ಖರೀದಿಗೆ ತೆರಳಿದ್ದರು. ಈ ವೇಳೆ, ಹೆಲ್ಮೆಟ್ ಹಾಕಿಕೊಳ್ಳದೇ ಹಿಂತಿರುಗುತ್ತಿದ್ದಾಗ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ದ್ವಿಚಕ್ರ ವಾಹನ ನಿಲ್ಲಿಸಿ, ಅದರ ಕೀ ತೆಗೆದುಕೊಂಡಿರುವ ಸಬ್ ಇನ್ಸ್ಪೆಕ್ಟರ್ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ, ತಾನು ದಂಡ ಕಟ್ಟಲು ಸಿದ್ಧನಿರುವುದಾಗಿ ಶ್ರೀನಿವಾಸ್ ತಿಳಿಸಿದರೂ, ಪೊಲೀಸ್ ಒಪ್ಪಿಕೊಂಡಿಲ್ಲ. ತಂದೆಯ ಮೇಲೆ ಹಲ್ಲೆ ಮಾಡಿರುವುದನ್ನ ನೋಡಿರುವ ಮಗಳು 'ನಮ್ಮಪ್ಪನಿಗೆ ಹೊಡೆಯಬೇಡಿ' ಎಂದು ಕಣ್ಣೀರು ಹಾಕಿದ್ದಾಳೆ.
ಇದನ್ನೂ ಓದಿರಿ: "No UPA" ಎಂದ ಮಮತಾ.. ಕುತೂಹಲ ಕೆರಳಿಸಿದ ಸಂಜಯ್ ರಾವತ್-ರಾಹುಲ್ ಗಾಂಧಿ ಭೇಟಿ
ಇನ್ನು, ಪೊಲೀಸರ ನಡೆ ಪ್ರಶ್ನೆ ಮಾಡಿರುವ ಶ್ರೀನಿವಾಸ್ 'ನೀವೂ ನನಗ್ಯಾಕೆ ಹೊಡೆಯುತ್ತಿದ್ದೀರಿ? ದಂಡ ವಿಧಿಸಿ, ಚಲನ್ ನೀಡಿ' ಎಂದು ಪ್ರಶ್ನೆ ಮಾಡಿದ್ದಾರೆ. ಚಿಕ್ಕ ಬಾಲಕಿ ಕಣ್ಣೀರು ಹಾಕಲು ಶುರು ಮಾಡುತ್ತಿದ್ದಂತೆ ಸ್ಥಳೀಯರು ಒಟ್ಟಿಗೆ ಸೇರಿದ್ದು, ಪೊಲೀಸರ ನಡೆಯನ್ನ ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.