ನವದೆಹಲಿ : ಉಭಯ ಸದನಗಳಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಬೇಕು ಮತ್ತು ಪ್ರಧಾನಿಗಳು ಸದನಕ್ಕೆ ಬರಬೇಕೆಂದು ಒತ್ತಾಯಿಸಿ ಪ್ರತಿಪಕ್ಷಗಳು ಇಂದು ಪ್ರತಿಭಟನೆ ನಡೆಸಿದವು. ರಾಜ್ಯಸಭಾಧ್ಯಕ್ಷರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.
ಉಭಯ ಸದನಗಳ ಕಲಾಪ ಶುರುವಾಗುತ್ತಲೇ ಪ್ರತಿಪಕ್ಷಗಳು ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸುವಂತೆ ಒತ್ತಾಯಿಸಿದವು. ರಾಜ್ಯಸಭಾಧ್ಯಕ್ಷ ಜಗದೀಪ್ ಧನ್ಕರ್ ಅವರು ಈ ಸಂಬಂಧ ನಿಯಮ 267ರ ಪ್ರಕಾದ 27 ನೋಟಿಸ್ಗಳನ್ನು ಪಡೆದಿರುವುದಾಗಿ ಹೇಳಿದರು ಟಿಎಂಸಿ ನಾಯಕ ಡೆರೆಕ್ ಓಬ್ರೈನ್ ಹಿಂಸಾಚಾರದ ಬಗ್ಗೆ ಪ್ರಸ್ತಾಪಿಸಿದಾಗ, ಈ ಬಗ್ಗೆ ಎಚ್ಚರಿಕೆ ನೀಡಿ ಕಲಾಪ ಮುಂದೂಡಿಕೆ ಮಾಡಿದರು.
ಲೋಕಸಭೆಯಲ್ಲೂ ಪ್ರತಿಪಕ್ಷಗಳು ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸುವಂತೆ ಪಟ್ಟು ಹಿಡಿದಿದ್ದು, ಕಲಾಪವನ್ನು 2 ಗಂಟೆವರೆಗೆ ಮುಂದೂಡಿಕೆ ಮಾಡಲಾಯಿತು.
ಆಪ್ ಸಂಸದ ಸಂಜಯ್ ಸಿಂಗ್ ಅಮಾನತು: ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರನ್ನು ಮುಂಗಾರು ಅಧಿವೇಶನ ಮುಗಿಯುವವರಿಗೆ ಅಮಾನತು ಮಾಡಲಾಗಿದೆ. ರಾಜ್ಯಸಭೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸಭಾ ನಾಯಕ ಪಿಯೂಷ್ ಗೋಯಲ್ ಅವರು ಅಮಾನತುಗೊಳಿಸುವ ಬಗ್ಗೆ ಮಂಡಿಸಿದ ಪ್ರಸ್ತಾಪವನ್ನು ಅಂಗೀಕರಿಸಲಾಯಿತು. ಇದಕ್ಕೂ ಮೊದಲು ರಾಜ್ಯಸಭಾ ಅಧ್ಯಕ್ಷರಾದ ಜಗದೀಪ್ ಧನ್ಕರ್, ಅಶಿಸ್ತಿನ ವರ್ತನೆಗೆ ಎಚ್ಚರಿಕೆ ನೀಡಿದ್ದರು.
ರಾಜ್ಯಸಭೆ ಕಲಾಪ 12 ಗಂಟೆಗೆ ಮತ್ತೆ ಪ್ರಾರಂಭವಾದಾಗ ವಿಪಕ್ಷಗಳು ಗದ್ದಲ ಮುಂದುವರೆಸಿದವು. ವಿಪಕ್ಷ್ಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಮಣಿಪುರ ಹಿಂಸಾಚಾರದ ಬಗ್ಗೆ ಹೇಳಿಕೆ ನೀಡುವಂತೆ ಬಿಗಿ ಪಟ್ಟುಹಿಡಿದರು.
ಇದನ್ನೂ ಓದಿ : ಮಣಿಪುರ ಹಿಂಸಾಚಾರ ಕುರಿತು ಪ್ರಧಾನಿ ಮೋದಿ ಹೇಳಿಕೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಪ್ರತಿಭಟನೆ - VIDEO