ಜೈಪುರ್(ರಾಜಸ್ಥಾನ): ರಾಜಸ್ಥಾನದ ಉದಯ್ಪುರದಲ್ಲಿ ನಡೆದ ಹಿಂದೂ ವ್ಯಕ್ತಿಯ ಕೊಲೆ ಪ್ರಕರಣದ ತನಿಖೆ ಎನ್ಐಎನಿಂದ ನಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹೊಸ ಹೊಸ ಮಾಹಿತಿ ಹೊರಬೀಳಲು ಶುರುವಾಗಿವೆ. ಸದ್ಯದ ಮಾಹಿತಿ ಪ್ರಕಾರ ದಾವತ್-ಎ-ಇಸ್ಲಾಮಿ ಸಂಘಟನೆಗೆ ಸಂಬಂಧಿಸಿದ 40 ಮಂದಿಗೋಸ್ಕರ ಎನ್ಐಎ ತೀವ್ರ ಶೋಧ ಕಾರ್ಯ ನಡೆಸುತ್ತಿದೆ.
ಇವರಿಗೆಲ್ಲ ಪಾಕಿಸ್ತಾನದಿಂದ ಆನ್ಲೈನ್ ತರಬೇತಿ ನೀಡಲಾಗುತ್ತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಮೊಬೈಲ್ ಸಂಖ್ಯೆ ಆಧಾರದ ಮೇಲೆ ಎನ್ಐಎ ಮತ್ತು ಎಸ್ಐಟಿ 40 ಜನರನ್ನ ಗುರಿಯಾಗಿಸಿದ್ದು, ಅವರಿಗೋಸ್ಕರ ಶೋಧಕಾರ್ಯ ಆರಂಭಗೊಂಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಲಿಸ್ಟ್ನಲ್ಲಿರುವ 40 ಮಂದಿ ರಾಜಸ್ಥಾನದ ಆರು ಜಿಲ್ಲೆಗಳಿಗೆ ಸೇರಿದ್ದು, ಕಳೆದ ಒಂದು ವರ್ಷದಿಂದ ದಾವತ್ - ಎ - ಇಸ್ಲಾಮಿ ಸಂಘಟನೆ ಜೊತೆ ಗುರುತಿಸಿಕೊಂಡಿದ್ದರಂತೆ. ಇವರಿಗೆ ವಾಟ್ಸ್ಆ್ಯಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಪಾಕ್ನಿಂದ ತರಬೇತಿ ನೀಡಲಾಗುತ್ತಿತ್ತು ಎಂದು ಹೇಳಲಾಗ್ತಿದೆ.
ಇದನ್ನೂ ಓದಿರಿ: ಕ್ರಿಕೆಟ್ ಬ್ಯಾಟ್ನಿಂದ ಗಂಡನಿಗೆ ಹಿಗ್ಗಾಮುಗ್ಗಾ ಥಳಿಸಿದ ಪತ್ನಿ.. ಆಸ್ಪತ್ರೆಗೆ ದಾಖಲಾದ ಪತಿ
ನೂಪುರ್ ಶರ್ಮಾ ಅವರನ್ನ ಬೆಂಬಲಿಸಿ ಪೋಸ್ಟ್ ಮಾಡಿದವರ ಶಿರಚ್ಛೇದ ಮಾಡಲು ಪಾಕಿಸ್ತಾನದಿಂದಲೇ ತರಬೇತಿ ನೀಡಲಾಗಿತ್ತು ಎಂದು ಎನ್ಐಎ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳಾದ ಗೌಸ್ ಮೊಹಮ್ಮದ್ ಹಾಗೂ ಮೊಹಮ್ಮದ್ ರಿಯಾಜ್ ಈಗಾಗಲೇ ಬಂಧನವಾಗಿದ್ದು, ಅವರಿಂದ ಮಹತ್ವದ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆ ಬೆಂಬಲಿಸಿ ಟ್ವೀಟ್ ಮಾಡಿದ್ದ ಕನ್ಹಯ್ಯಲಾಲ್ ಎಂಬಾತನನ್ನ ರಾಜಸ್ಥಾನದ ಉದಯ್ಪುರದಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಘಟನೆ ನಡೆದ ಕೆಲ ಗಂಟೆಗಳಲ್ಲಿ ಆರೋಪಿಗಳ ಬಂಧನ ಮಾಡಲಾಗಿತ್ತು. ಈ ಪ್ರಕರಣವನ್ನ ಎನ್ಐಎ ತನಿಖೆ ನಡೆಸುತ್ತಿದೆ.