ಮುಂಬೈ/ಮಹಾರಾಷ್ಟ್ರ: ಡ್ರಗ್ಸ್ ಪ್ರಕರಣದ ಆರೋಪಿಯಾಗಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್ ಜಾಮೀನು ಅರ್ಜಿಯನ್ನು ಮುಂಬೈನ ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ.
ಜನವರಿ 13 ರಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಯಿಂದ ಬಂಧಿಸಲ್ಪಟ್ಟಿದ್ದ ಖಾನ್‌ನನ್ನು ಜನವರಿ 18 ರಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಹಿಂದೆ, ಸಿಬಿಡಿ ತೈಲ ಮತ್ತು ಇತರ ರಾಸಾಯನಿಕಗಳನ್ನು ಗಾಂಜಾ ಜೊತೆ ಬೆರೆಸಲು ಯೋಜಿಸುತ್ತಿರುವ ಕುರಿತ ಸಮೀರ್ ಬಳಿ ಇದ್ದ ಕೆಲವು ಮೆಸೇಜ್, ಚಾಟ್‌ಗಳು ಎನ್‌ಸಿಬಿಗೆ ದೊರೆತಿತ್ತು ಎಂದು ಪ್ರಾಸಿಕ್ಯೂಟರ್ ಹೇಳಿದ್ದಾರೆ. ಕರಣ್ ಮತ್ತು ಸಮೀರ್ ಖಾನ್ ನಡುವೆ ಅನೇಕ ವ್ಯವಹಾರಗಳು ನಡೆದಿದ್ದು, 20,000 ರೂ. ಗೂ ಅಧಿಕ ಹಣವನ್ನು ವಹಿವಾಟು ಮಾಡಿರುವುದು ತಿಳಿದು ಬಂದಿದೆ.
ಸಮೀರ್ ಡ್ರಗ್ಸ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು, ಆದ್ದರಿಂದ ಅವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ 27 ಎ (ಅಕ್ರಮ ಸಂಚಾರಕ್ಕೆ ಹಣಕಾಸು ಒದಗಿಸುವುದು ಮತ್ತು ಅಪರಾಧಿಗಳಿಗೆ ಆಶ್ರಯ ನೀಡಿದ್ದಕ್ಕಾಗಿ ನೀಡುವ ಶಿಕ್ಷೆ) ಯಡಿ ಕೇಸ್ ದಾಖಲಿಸಲಾಗಿದೆ ಎಂದು ಎನ್‌ಸಿಬಿ ಪ್ರಾಸಿಕ್ಯೂಟರ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಜನವರಿ 14 ರಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್, ಕಾನೂನಿನ ಮುಂದೆ ಯಾರು ದೊಡ್ಡವರಲ್ಲ, ಯಾವುದೇ ತಾರತಮ್ಯವಿಲ್ಲದೇ ಕಾನೂನು ಎಲ್ಲರಿಗೂ ಅನ್ವಯವಾಗುತ್ತೆ. ನ್ಯಾಯ ಕೊಡಲು ಕಾನೂನು ಸಮಯ ತೆಗೆದುಕೊಳ್ಳುತ್ತದೆ. ಮತ್ತು ನ್ಯಾಯಕ್ಕೆ ಗೆಲುವು ಸಿಗುತ್ತದೆ. ಆದ್ದರಿಂದ ನನಗೆ ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ಗೌರವವಿದೆ ನಾನು ಕಾನೂನನ್ನು ಗೌರವಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ:ಸ್ನೇಹಿತನ ಮದುವೆಗೆ ಬಂದು ಸ್ಮಶಾನ ಸೇರಿದ ಯುವಕ: ಸಿಸಿಟಿವಿಯಲ್ಲಿ ಸೆರೆಯಾದ ಸಾವಿನ ಕ್ಷಣ