ಬರ್ವಾನಿ (ಮಧ್ಯಪ್ರದೇಶ) : ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ನರ್ಮದಾ ನದಿಯಲ್ಲಿ ಬುಧವಾರ ಸ್ನಾನ ಮಾಡುತ್ತಿದ್ದ ನಾಲ್ವರು ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರು 30 ರಿಂದ 40 ವರ್ಷ ವಯಸ್ಸಿನವರಾಗಿದ್ದು, ಅವರು ತಬ್ಲಿಘಿ ಜಮಾತ್‌ನೊಂದಿಗೆ ಸಂಬಂಧ ಹೊಂದಿದ್ದರು ಎಂಬುದು ತಿಳಿದುಬಂದಿದೆ.
ಕನಿಷ್ಠ 11 ಮಂದಿ ನದಿಯಲ್ಲಿ ಸ್ನಾನ ಮಾಡುತ್ತಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅವರು ಜಮಾತ್‌ನ ಸಭೆಯಲ್ಲಿ ಪಾಲ್ಗೊಳ್ಳಲು ನೆರೆಯ ಧಾರ್ ಜಿಲ್ಲೆಯ ಮಿರ್ಜಾಪುರಕ್ಕೆ ಬಂದಿದ್ದರು. ಬಳಿಕ ನದಿ ತೀರಕ್ಕೆ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ತೆರಳಿದ್ದರು. ನಂತರ ನರ್ಮದಾ ನದಿಯಲ್ಲಿ ಸ್ನಾನ ಮಾಡುವಾಗ ನದಿಯ ಪ್ರವಾಹಕ್ಕೆ ಓರ್ವ ವ್ಯಕ್ತಿ ಕೊಚ್ಚಿ ಹೋಗಿದ್ದಾರೆ. ಅವರ ಕಿರುಚಾಟವನ್ನು ಕೇಳಿದ ಇತರ ಮೂವರು ಆ ವ್ಯಕ್ತಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ. ಜಿಲ್ಲೆಯ ಅಂಜಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಲೋಹರಾ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ.
ನದಿಯಲ್ಲಿ ಪತ್ತೆಯಾಗದ ಇಬ್ಬರ ಮೃತದೇಹ : ಮೃತದೇಹಗಳನ್ನು ಹೊರತೆಗೆಯಲು ಸ್ಥಳೀಯ ಬೋಟ್‌ಮೆನ್‌ಗಳೊಂದಿಗೆ ಎಸ್‌ಡಿಆರ್‌ಎಫ್ ಡೈವರ್‌ಗಳನ್ನು ಸೇವೆಗೆ ಕರೆಸಲಾಯಿತು. ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಮೊಹಮ್ಮದ್ ಇಫೈತುಲ್ಲಾ ಮತ್ತು ಜುನೈದ್ ಎಂಬುವರ ಮೃತದೇಹಗಳನ್ನು ನದಿಯಿಂದ ಹೊರತೆಗೆದಿದ್ದಾರೆ. ಅಸ್ರಾರ್ ಮತ್ತು ಮೊಹಮ್ಮದ್ ಜುಬೈರ್ ಅವರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ. ಉಳಿದ ಇಬ್ಬರ ಮೃತದೇಹಗಳನ್ನು ಹೊರ ತೆಗೆಯುವ ಪ್ರಯತ್ನ ನಡೆಯುತ್ತಿದೆ.
ಮೃತರ ಶರೀರ ಮರಣೋತ್ತರ ಪರೀಕ್ಷೆಗೆ ರವಾನೆ: ಹಿರಿಯ ಪೊಲೀಸ್ ಅಧಿಕಾರಿಗಳಾದ ಕುಂದಲ್ ಸಿಂಗ್ ಮಂಡ್ಲೋಯ್, ಬಲದೇವ್ ಸಿಂಗ್ ಮುಜಲ್ದಾ ಮತ್ತು ಇತರರು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಗುಜರಾತ್‌ನ ನಿವಾಸಿಗಳಾಗಿರುವ ಮೃತರ ಶವಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಅಂಜಾದ್ ಆಸ್ಪತ್ರೆಗೆ ರವಾನಿಸಿದ್ದಾರೆ.
ನಿಂತಿದ್ದ ಬಸ್ಗಳಿಗೆ ಡಿಕ್ಕಿ ಹೊಡೆದ ಟ್ರಕ್: ಮಧ್ಯಪ್ರದೇಶ ಜಿಲ್ಲೆಯಲ್ಲಿ (ಫೆಬ್ರವರಿ 25) ರಂದು ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಮೊಹಾನಿಯಾ ಸುರಂಗದ ಬಳಿ ಟ್ರಕ್ವೊಂದು ನಿಂತಿದ್ದ ಬಸ್ಗಳಿಗೆ ಡಿಕ್ಕಿ ಹೊಡೆದ ಪರಿಣಾಮ, 14 ಜನರು ಮೃತಪಟ್ಟಿದ್ದರು. ಈ ದುರ್ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಗೃಹ ಸಚಿವ ಅಮಿತ್ ಶಾ ಅವರ ರ್‍ಯಾಲಿಗೆ ತೆರಳಿದ್ದ ಬಸ್ ವಾಪಸ್ ಆಗುತ್ತಿದ್ದವು. ಈ ವೇಳೆ, ಬಸ್ ಚಾಲಕರು ಸುರಂಗ ಮಾರ್ಗದ ಬಳಿ ಬಸ್ಗಳನ್ನು ನಿಲ್ಲಿಸಿದ್ದರು. ಆಗ ಎದುರಗಡೆಯಿಂದ ವೇಗವಾಗಿ ಬರುತ್ತಿದ್ದ ಟ್ರಕ್ವೊಂದು ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಬಸ್ವೊಂದು ಪಲ್ಟಿಯಾಗಿದ್ದು, ಉಳಿದ ಬಸ್ಗಳಿಗೆ ಡಿಕ್ಕಿ ರಭಸಕ್ಕೆ ಜಖಂಗೊಂಡಿದ್ದವು. ಈ ಭೀಕರ ಅಪಘಾತದಲ್ಲಿ 14 ಜನ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು. ಇದರಲ್ಲಿ 5 ಮಂದಿಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿತ್ತು.
ಇದನ್ನೂ ಓದಿ : ನಿಂತಿದ್ದ ಬಸ್ಗಳಿಗೆ ಡಿಕ್ಕಿ ಹೊಡೆದ ಟ್ರಕ್.. 14 ಜನ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ