ಬೆರಿನಾಗ್(ಉತ್ತರಾಖಂಡ್): ಮಲತಂದೆ ಮತ್ತು ಹೆತ್ತ ತಾಯಿಯೊಬ್ಬಳು ತಮ್ಮ 12 ವರ್ಷದ ಮಗಳನ್ನು ಆರು ತಿಂಗಳ ಅಂತರದಲ್ಲಿ ಎರಡೆರಡು ಬಾರಿ ಮದುವೆ ಮಾಡಿ ಅತ್ತೆ ಮನೆಗೆ ಕಳುಹಿಸಿರುವ ವಿಚಿತ್ರ ಮತ್ತು ಆತಂಕಕಾರಿ ಪ್ರಕರಣ ಉತ್ತರಾಖಂಡ್ದಲ್ಲಿ ಬೆಳಕಿಗೆ ಬಂದಿದೆ. ಈ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಪೊಲೀಸರು ಬಾಲಕಿಯ ತಾಯಿ ಮತ್ತು 2ನೇ ಪತಿಯನ್ನು ಬಂಧಿಸಿ ಮೊದಲನೇ ಪತಿಯ ಬಂಧನಕ್ಕೆ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಏನಿದು ಪ್ರಕರಣ: ಧಾರ್ಚುಲಾದಲ್ಲಿ 12 ವರ್ಷದ ಬಾಲಕಿಗೆ ಎರಡು ಬಾರಿ ವಿವಾಹವಾಗಿದೆ. ಬಾಲಕಿ ಗರ್ಭಿಣಿಯಾಗಿದ್ದರಿಂದ ಈ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಶಿಶು ಅಭಿವೃದ್ಧಿ ಇಲಾಖೆಗೆ ವಿಷಯ ತಿಳಿದಿದ್ದು, ಅವರು ಈ ಮಾಹಿತಿಯನ್ನು ಪೊಲೀಸರ ಗಮನಕ್ಕೆ ತಂದಿದ್ದರು. ಆಗ ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು, ಈ ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಎರಡನೇ ಪತಿಯನ್ನು ಬಂಧಿಸಿದ್ದರು. ಈಗ ಬಾಲಕಿಯ ತಾಯಿಯನ್ನು ಸಹ ಬಂಧಿಸಿದ್ದಾರೆ.
ಓದಿ: ವರುಣ ದೇವನ ಕೃಪೆಗಾಗಿ ಮಕ್ಕಳ ಮದುವೆ.. ಆದರಿದು ಬಾಲ್ಯ ವಿವಾಹವಲ್ಲ
ಸಂತ್ರಸ್ತೆ ಧಾರ್ಚುಲಾ ಪ್ರದೇಶದ ಗ್ರಾಮವೊಂದರ ನಿವಾಸಿಯಾಗಿದ್ದು, ಇದು ಆಕೆಯ ಎರಡನೇ ಮದುವೆ ಎಂದು ತನಿಖೆಯಿಂದ ತಿಳಿದುಬಂದಿದೆ. ಹುಡುಗಿಯ ತಾಯಿ ಮತ್ತು ಮಲತಂದೆಯು ತನ್ನ 12 ನೇ ವಯಸ್ಸಿನಲ್ಲಿ ಜೂನ್ 2021 ರಲ್ಲಿ ಧಾರ್ಚುಲಾದಲ್ಲಿ ಅವಳಿಗೆ ಮೊದಲ ವಿವಾಹವನ್ನು ಮಾಡಿದ್ದರು. ಗಂಡನ ಹೊಡೆತದಿಂದ ಬೇಸತ್ತು ಬಾಲಕಿ ತನ್ನ ತವರು ಮನೆಗೆ ಮರಳಿದ್ದಳು. ಬಳಿಕ ಆರು ತಿಂಗಳೊಳಗೇ ಅಂದ್ರೆ ಡಿಸೆಂಬರ್ 2021 ರಲ್ಲಿ ತಾಯಿ ಮತ್ತೆ ಆಕೆಗೆ ಬೆರಿನಾಗ್‌ನ 36 ವರ್ಷದ ವ್ಯಕ್ತಿಯೊಂದಿಗೆ ಮದುವೆ ಮಾಡಿಸಿದ್ದಾರೆ. ಅಂದಿನಿಂದ ಬಾಲಕಿ ತನ್ನ ಪತಿಯೊಂದಿಗೆ ಬೆರಿನಾಗ್‌ನಲ್ಲಿಯೇ ವಾಸಿಸುತ್ತಿದ್ದಳು.