ರುದ್ರಪುರ (ಉತ್ತರಾಖಂಡ): ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಗ್ರಾಹಕರು ಬಹಳ ಎಚ್ಚರಿಕೆಯಿಂದ ವಹಿವಾಟು ನಡೆಸಬೇಕಾಗಿದೆ. ಉತ್ತರಾಖಂಡದ ರುದ್ರಪುರ ಮೂಲದ ವ್ಯಕ್ತಿಯೊಬ್ಬ ಆನ್‌ಲೈನ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿ ಹಣ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.
ರುದ್ರಪುರದ ಮಲಿಕ್ ಕಾಲೋನಿಯ ನಿವಾಸಿ ರವಿ ಗ್ರೋವರ್ ಎಂಬಾತ ಪಿಜ್ಜಾ ಆರ್ಡರ್ ಮಾಡಲು ಗೂಗಲ್ನಲ್ಲಿ ಹುಡುಕಾಟ ನಡೆಸಿ 18002081234 ಕಸ್ಟಮರ್ ಕೇರ್ ಸಂಖ್ಯೆಯನ್ನು ಪಡೆದಿದ್ದಾನೆ. ಈ ಸಂಖ್ಯೆಗೆ ಕರೆ ಮಾಡಿ, ಅವರು ಹೇಳಿದಂತೆ ಆ್ಯಪ್ವೊಂದನ್ನು ಡೌನ್‌ಲೋಡ್ ಮಾಡಿದ್ದಾನೆ. ಮೊದಲು ಆ್ಯಪ್ನಲ್ಲಿ 5 ರೂ. ವಹಿವಾಟು ಮಾಡಲು ರವಿಗೆ ಕೇಳಲಾಗಿದೆ. ಆತ ತನ್ನ ಬ್ಯಾಂಕ್ ಖಾತೆಯಿಂದ 5 ರೂ. ಕಳುಹಿಸುತ್ತಿದ್ದಂತೆಯೇ 84,888 ರೂ. ಡೆಬಿಟ್ ಆಗಿದೆ.
ಇದನ್ನೂ ಓದಿ: ಚೀನಾದ ಆ್ಯಪ್ ಮೂಲಕ 50 ಕೋಟಿ ರೂ ವಂಚನೆ ಜಾಲ ಭೇದಿಸಿದ ಪೊಲೀಸರು
ತಾನು ವಂಚನೆಗೊಳಗಾಗಿರುವುದನ್ನು ಅರಿತ ರವಿ ತಕ್ಷಣವೇ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು ವಂಚಕರಿಗಾಗಿ ಬಲೆ ಬೀಸಿದ್ದಾರೆ.