ಗ್ರೇಟರ್ ನೋಯ್ಡಾ(ಉತ್ತರ ಪ್ರದೇಶ): ಕಾರಿನ ದಾಖಲಾತಿ ತೋರಿಸಲು ಕೇಳಿದ ಟ್ರಾಫಿಕ್ ಪೊಲೀಸನನ್ನೇ ವ್ಯಕ್ತಿಯೊಬ್ಬ ಕಿಡ್ನಾಪ್ ಮಾಡಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ಟ್ರಾಫಿಕ್ ಪೊಲೀಸ್ ಕಾನ್ಸ್ಟೇಬಲ್ ಒಬ್ಬರ ವಾಹನಗಳ ದಾಖಲಾತಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ, ಆರೋಪಿ ಸಚಿನ್ ರಾವತ್ ಎಂಬಾತನ ಕಾರು ತಡೆದಿರುವ ಟ್ರಾಫಿಕ್ ಪೊಲೀಸ್ ವಿರೇಂದ್ರ ಸಿಂಗ್ ದಾಖಲಾತಿ ಕೇಳಿದ್ದಾರೆ. ಈ ವೇಳೆ, ಕಾರಿನೊಳಗೆ ಕುಳಿತುಕೊಳ್ಳಿ ಎಂದಿರುವ ಆತ, ದಿಢೀರ್ನೇ ಕಾರ್ ಡೋರ್ ಲಾಕ್ ಮಾಡಿಕೊಂಡು ಸುಮಾರು 10 ಕಿಲೋ ಮೀಟರ್ ದೂರ ಕರೆದೊಯ್ದಿದ್ದಾನೆ. ಇದಾದ ಬಳಿಕ ಅಜಯ್ಪುರ್ ಪೊಲೀಸ್ ಚೌಕಿ ಬಳಿ ಬಲವಂತವಾಗಿ ಕೆಳಗಿಳಿಸಿ ಪರಾರಿಯಾಗಿದ್ದಾನೆಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಸೆಕ್ಷನ್ 364(ಕಿಡ್ನಾಪ್), 353(ಕಿರುಕುಳ ಹಾಗೂ ಕ್ರಿಮಿನಲ್) ಹಾಗೂ 368ರ ಅಡಿ ದೂರು ದಾಖಲಾಗಿತ್ತು. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಈಗಾಗಲೇ ಆರೋಪಿಯ ಬಂಧನ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸುರ್ಜಾಪುರ್ ರಸ್ತೆಯಲ್ಲಿ ವಾಹನಗಳ ದಾಖಲಾತಿ ಪರಿಶೀಲನೆ ನಡೆಸಿದ್ದ ವೇಳೆ ಡ್ರೈವರ್ ಈ ರೀತಿಯಾಗಿ ನಡೆದುಕೊಂಡಿದ್ದನೆಂದು ವರದಿಯಾಗಿದೆ.