ಮುಂಬೈ: ಕಳೆದ ಎರಡು ತಿಂಗಳಿನಿಂದ ಮಹಾರಾಷ್ಟ್ರದಲ್ಲಿ ವಿಧಿಸಿದ್ದ ಲಾಕ್ಡೌನ್ಅನ್ನು ಸಿಎಂ ಉದ್ಧವ್ ಠಾಕ್ರೆ ಸರ್ಕಾರ ಹಂತ ಹಂತವಾಗಿ ಸಡಿಲಿಸಲು ಮುಂದಾಗಿದ್ದಾರೆ. ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ನಿರ್ವಹಣಾ ವಿಪತ್ತು ಸಭೆಯಲ್ಲಿ 18 ಜಿಲ್ಲೆಗಳನ್ನು ಅನ್ಲಾಕ್ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಪರಿಹಾರ ಮತ್ತು ಪುನರ್ವಸತಿ ರಾಜ್ಯ ಸಚಿವ ವಿಜಯ್ ವಾಡೆಟ್ಟಿವಾರ್ ಅಧಿಕೃತವಾಗಿ ಘೋಷಿಸಿದ್ದಾರೆ.
ಸಕ್ರಿಯ ಪ್ರಕರಣಗಳು ಶೇಕಡಾ 5 ಕ್ಕಿಂತ ಕಡಿಮೆಯಿರುವ 18 ಜಿಲ್ಲೆಗಳನ್ನು ನಾಳೆಯಿಂದ ಅನ್ಲಾಕ್ ಮಾಡಲಾಗುವುದು. ಮುಂಬೈನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾದರೆ, ಮುಂದಿನ ವಾರದಿಂದ ಪೂರ್ಣ ಪ್ರಮಾಣದ ಅಗತ್ಯ ಸೇವೆಗಳ ಕಾರ್ಯ ನಿರ್ವಹಣೆಗೆ ಅವಕಾಶ ಕೊಡಲು ನಿರ್ಧರಿಸಲಾಗಿದೆ. ಅಲ್ಲದೆ, 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.
ಕೋವಿಡ್ ಎರಡನೇ ಅಲೆ ಕಾಲಿಟ್ಟಾಗ ರಾಜ್ಯದಲ್ಲಿ ಸುಮಾರು 60 ಸಾವಿರ ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆ ದೇಶದಲ್ಲೇ ಮೊದಲಿಗೆ ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ವಿಧಿಸಲಾಗಿತ್ತು.