ಜೈಪುರ (ರಾಜಸ್ಥಾನ) : ರಾಜಸ್ಥಾನದ ಜೈಸಲ್ಮೇರ್‌ನ ಮೂಲ್ ಸಾಗರ್ ಗ್ರಾಮದ ಸರ್ಕಾರಿ ಭೂಮಿಯಿಂದ ಹೊರಹಾಕಲ್ಪಟ್ಟಿದ್ದರಿಂದ ನಿರಾಶ್ರಿತರಾಗಿರುವ ಪಾಕಿಸ್ತಾನದ ಹಿಂದೂ ವಲಸಿಗರಿಗೆ ಈಗ 40 ಬಿಘಾ ಭೂಮಿ ಸಿಗಲಿದೆ. ಭೂಮಿ ನೀಡುವ ಬಗ್ಗೆ ಜಿಲ್ಲಾಡಳಿತ ಘೋಷಣೆ ಮಾಡಿದೆ. ಪಾಕಿಸ್ತಾನದಿಂದ ಬಂದಿರುವ ಕೆಲ ಹಿಂದೂ ವಲಸಿಗರು ತಮ್ಮ ಸಂಬಂಧಿಕರೊಂದಿಗೆ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾದ ತಾತ್ಕಾಲಿಕ ಮನೆಗಳಲ್ಲಿ ವಾಸಿಸುತ್ತಿದ್ದರು. ಆದರೆ ಇತ್ತೀಚೆಗೆ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಲಾಗಿತ್ತು. ಈ ಕ್ರಮಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು.
ಈಗ ಜಿಲ್ಲಾಧಿಕಾರಿ ಟೀನಾ ದಾಬಿ ಅವರು ವಲಸಿಗರಿಗೆ 40 ಬಿಘಾ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಿದ್ದಾರೆ. ಆದರೆ, ಭಾರತೀಯ ಪೌರತ್ವ ಹೊಂದಿರುವವರಿಗೆ ಮಾತ್ರ ಈ ಭೂಮಿಯನ್ನು ನೀಡಲಾಗುವುದು. ಹಿಂದೂಗಳನ್ನು ಎತ್ತಂಗಡಿ ಮಾಡಿದ ಕ್ರಮಕ್ಕೆ ಪಕ್ಷಾತೀತವಾಗಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅವರಿಗೆ ಉಚಿತವಾಗಿ ಊಟ, ನೀರು ಮತ್ತು ವಸತಿ ವ್ಯವಸ್ಥೆ ಕಲ್ಪಿಸಿದ್ದರು. ಈ ನಿರಾಶ್ರಿತರು ಪ್ರಸ್ತುತ ರೈನ್ ಬಸೆರಾದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಇಂದಿರಾ ರಸೋಯಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಎಲ್ಲಾ 50 ಕುಟುಂಬಗಳು ಪ್ರಸ್ತುತ ರೈನ್ ಬಸೆರಾದಲ್ಲಿಯೇ ನೆಲೆಸಿವೆ.
ಮೂಲ್ ಸಾಗರ್‌ನಲ್ಲಿ ಅರ್ಬನ್ ಇಂಪ್ರೂವ್‌ಮೆಂಟ್ ಟ್ರಸ್ಟ್ (ಯುಐಟಿ) ಭೂಮಿ ಮಂಜೂರು ಮಾಡಿದ ನಂತರ, ಶೀಘ್ರದಲ್ಲೇ ಈ ವಲಸಿಗರು ಹೊಸ ಸ್ಥಳಕ್ಕೆ ಹೋಗಿ ತಮ್ಮ ಗುಡಿಸಲುಗಳನ್ನು ನಿರ್ಮಿಸಿಕೊಳ್ಳಲಿದ್ದಾರೆ. ನಗರಾಭಿವೃದ್ಧಿ ಟ್ರಸ್ಟ್ ಕಾರ್ಯದರ್ಶಿ ಜಗದೀಶ್ ಆಶಿಯಾ ಮಾತನಾಡಿ, ಜಿಲ್ಲಾಧಿಕಾರಿ ಟೀನಾ ದಾಬಿ ಅವರ ಆದೇಶದ ಮೇರೆಗೆ ಪಾಕ್ ನಿರಾಶ್ರಿತರಿಗೆ ಸ್ಥಳ ಗುರುತಿಸಿದ್ದು, ಏಳು ದಿನಗಳಲ್ಲಿ ಅಲ್ಲಿಗೆ ಹೋಗಿ ನೆಲೆಸುವಂತೆ ಅವರಿಗೆ ಸೂಚನೆ ನೀಡಲಾಗಿದೆ. ಗ್ರಾಮದಲ್ಲಿ ಸುಮಾರು 40 ಬಿಘಾ ಭೂಮಿಯನ್ನು ಅವರಿಗಾಗಿ ಕಾಯ್ದಿರಿಸಲಾಗಿದೆ ಎಂದರು.
ಸುಮಾರು 40 ಬಿಘಾ ಭೂಮಿಯಲ್ಲಿ 250 ಕುಟುಂಬಗಳನ್ನು ನೆಲೆಗೊಳಿಸುವ ಯೋಜನೆ ಇದೆ ಎಂದು ಯುಐಟಿ ಅಧಿಕಾರಿ ತಿಳಿಸಿದ್ದಾರೆ. ಭಾರತೀಯ ಪೌರತ್ವ ಪಡೆದವರಿಗೆ ಯುಐಟಿ ಗುತ್ತಿಗೆ ನೀಡುತ್ತದೆ. ಮತ್ತೊಂದೆಡೆ, ಇನ್ನೂ ಪೌರತ್ವ ಪಡೆಯದವರ ದಾಖಲೆಗಳನ್ನು ಪಡೆಯಲಾಗುತ್ತದೆ ಮತ್ತು ಅವರ ಪೌರತ್ವಕ್ಕಾಗಿ ಪ್ರಯತ್ನಿಸಲಾಗುತ್ತದೆ. ಪೌರತ್ವ ಸಿಕ್ಕ ತಕ್ಷಣ ಅವರಿಗೂ ಭೂ ಪಟ್ಟಾ ನೀಡಲಾಗುವುದು. ಪ್ರಸ್ತುತ, ಈ 50 ಕುಟುಂಬಗಳು ಹೊಸ ಸ್ಥಳದಲ್ಲಿ ತಮ್ಮ ಮನೆಗಳನ್ನು ನಿರ್ಮಿಸಲು ಸಾಧ್ಯವಾಗಲಿದೆ.
ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಸರ್ಕಾರಿ ಭೂಮಿಯಲ್ಲಿ ನೆಲೆಸಿರುವ ಪಾಕಿಸ್ತಾನದಿಂದ ವಲಸೆ ಬಂದ ಹಿಂದೂಗಳ ಮನೆಗಳನ್ನು ನೆಲಸಮಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಸಲ್ಮೇರ್ ಜಿಲ್ಲಾಧಿಕಾರಿ ಟೀನಾ ದಾಬಿ ತೀವ್ರ ಟೀಕೆಗೆ ಗುರಿಯಾಗಿದ್ದರು. ವರದಿಗಳ ಪ್ರಕಾರ, 150 ಕ್ಕೂ ಹೆಚ್ಚು ಮಹಿಳೆಯರು, ಪುರುಷರು ಮತ್ತು ಮಕ್ಕಳನ್ನು ಹೊಂದಿದ್ದ 50 ಕ್ಕೂ ಹೆಚ್ಚು ಕಚ್ಚಾ ಮನೆಗಳನ್ನು ಟೀನಾ ದಾಬಿಯ ಆದೇಶದ ಮೇರೆಗೆ ನೆಲಸಮ ಮಾಡಲಾಗಿತ್ತು.
ಇದನ್ನು ವಿರೋಧಿಸಿದ ಹಿಂದೂ ವಲಸಿಗರು ಜೈಸಲ್ಮೇರ್‌ನಲ್ಲಿರುವ ಜಿಲ್ಲಾಧಿಕಾರಿಯ ಮನೆಯ ಹೊರಗೆ ಟೆಂಟ್‌ಗಳನ್ನು ಹಾಕಿ ಪ್ರತಿಭಟನೆ ನಡೆಸಿದ್ದರು. ಅತಿಕ್ರಮಣ ತೆರವು ಅಭಿಯಾನವನ್ನು ವಿರೋಧಿಸಿದ ಹಿಂದೂ ವಲಸಿಗರು ತಮ್ಮ ಸಮಸ್ಯೆಗಳನ್ನು ಆಲಿಸಬೇಕೆಂದು ಒತ್ತಾಯಿಸಿದ್ದರು. ಟೀನಾ ದಾಬಿ ಕೂಡ ಸೋಷಿಯಲ್ ಮೀಡಿಯಾದಲ್ಲಿ ಟೀಕಾಪ್ರಹಾರ ನಡೆಸಿದ್ದರು.
ಇದನ್ನೂ ಓದಿ : ದೇಶಾದ್ಯಂತ 2,000ದ ನೋಟು ಬದಲಾವಣೆ ಆರಂಭ: ಮೊದಲ ದಿನ ಕಾಣದ ಜನಜಂಗುಳಿ