ತಿರುವನಂತಪುರಂ(ಕೇರಳ): ದೇಶದಲ್ಲಿ ಮಾರಣಾಂತಿಕ ಕೊರೊನಾ ರಣಕೇಕೆ ಹಾಕುತ್ತಿದ್ದ ವೇಳೆ ಕೇರಳದಲ್ಲಿ ಅದನ್ನು ಸಮರ್ಥವಾಗಿ ತಡೆಯಲಾಗಿತ್ತು. ಇದರ ಹಿಂದೆ ಅಂದಿನ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರ ಶ್ರಮ ಹೆಚ್ಚಿತ್ತು. ಅದೇ ವೇಳೆ ಪಿಪಿಇ ಕಿಟ್ ಮತ್ತು ಇತರೆ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿದ್ದು, ಮಾಜಿ ಸಚಿವೆಗೆ ಲೋಕಾಯುಕ್ತದಿಂದ ನೋಟಿಸ್ ಜಾರಿ ಮಾಡಿ ತನಿಖೆಗೆ ಸೂಚಿಸಲಾಗಿದೆ.
2020 ರಲ್ಲಿ ಮಾಡಿ ಖರೀದಿಗಳಲ್ಲಿ ಮಾಜಿ ಸಚಿವೆ ಕಿಕ್ಬ್ಯಾಕ್ ಪಡೆದಿದ್ದಾರೆ. ಪಿಪಿಇ ಕಿಟ್ಗಳನ್ನು ಪ್ರತಿ ಯೂನಿಟ್ಗೆ 1500 ಕ್ಕೂ ಅಧಿಕ ಹಣ ನೀಡಿ ಖರೀದಿ ಮಾಡಲಾಗಿದೆ. ಇದು ಮಾರುಕಟ್ಟೆ ದರಕ್ಕಿಂತಲೂ ಹೆಚ್ಚು. ಇದರಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿತ್ತು. ಈ ದೂರಿನ ಅನ್ವಯ ಸಿಪಿಐ(ಎಂ) ನಾಯಕಿಗೆ ಸಮನ್ಸ್ ಜಾರಿ ಮಾಡಲಾಗಿತ್ತು.
ಬೆಲೆಗಿಂತಲೂ ಅವುಗಳ ಅಗತ್ಯವಿತ್ತು: ಇನ್ನು ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶೈಲಜಾ ಅವರು, ಕೋವಿಡ್ ವೇಳೆ ಪಿಪಿಇ ಕಿಟ್ಗಳ ಅಗತ್ಯವಿತ್ತು. ಹೀಗಾಗಿ ಹೆಚ್ಚಿನ ಬೆಲೆ ನೀಡಿ ಕಿಟ್ ಖರೀದಿ ಮಾಡಲಾಗಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅನುಮತಿಯ ಮೇರೆಗೆ ಇದನ್ನು ಮಾಡಲಾಗಿದೆ. ಜನರ ಜೀವ ಮುಖ್ಯವಾದ್ದರಿಂದ ಮುಖ್ಯಮಂತ್ರಿಗಳು ಇದನ್ನು ಅನುಮೋದಿಸಿದ್ದರು ಎಂದು ಸಮರ್ಥಿಸಿಕೊಂಡಿದ್ದರು.
ಕೆಲ ದಿನಗಳ ಹಿಂದೆ ಮಾಜಿ ಸಚಿವೆ ಶೈಲಜಾ ಅವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ನೀಡಲು ಸಂಸ್ಥೆ ಮುಂದಾಗಿತ್ತು. ಆದರೆ, ಸಿಪಿಐ(ಎಂ) ಹೈಕಮಾಂಡ್ ಪ್ರಶಸ್ತಿ ತಿರಸ್ಕರಿಸಲು ಸೂಚಿಸಿದ ಕಾರಣ ಅವರು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ನಿರಾಕರಿಸಿದ್ದರು.