ನವದೆಹಲಿ: ಉತ್ತರಪ್ರದೇಶಕ್ಕೆ ಸೇರಿದ, ರಾಷ್ಟ್ರ ರಾಜಧಾನಿ ದೆಹಲಿಯ ಪಕ್ಕದಲ್ಲಿರುವ ಗ್ರೇಟರ್ ನೋಯ್ಡಾದಲ್ಲಿ ವಿದೇಶಿ ಯುವತಿಯೊಬ್ಬಳು ಅಪಾರ್ಟ್ಮೆಂಟ್ವೊಂದರ 14 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೀನ್ಯಾ ಮೂಲದ ವಿನ್ನಿ ಮುನ್ಯಾಸಾ ಇಡಂಬೋ(25) ಆತ್ಮಹತ್ಯೆಗೆ ಶರಣಾಗಿರುವ ವಿದೇಶಿ ಯುವತಿ ಎಂದು ಗುರುತಿಸಲಾಗಿದೆ.
ಥಾಣಾ ಬೀಟಾ ಪ್ರದೇಶದ ಕಾಸಾ ಗ್ರ್ಯಾಂಡ್ ಸೊಸೈಟಿ ಅಪಾರ್ಟ್ಮೆಂಟ್ನ 14 ನೇ ಮಹಡಿಯಿಂದ ಕೀನ್ಯಾ ಮೂಲದ ವಿನ್ನಿ ಮುನ್ಯಾಸಾ ಇಡಂಬೋ ಹಾರಿದ್ದಾರೆ. ಬಳಿಕ ಅಲ್ಲಿದ್ದ ಜನರು ಇದನ್ನು ಗಮನಿಸಿ ಕೂಡಲೇ ಯುವತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ತೀವ್ರ ರಕ್ತಸ್ರಾವದಿಂದಾಗಿ ಆಕೆ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಸೋಂಕಿತರ 'ರೈಲ್ವೆ ಬೋಗಿ ವಾರ್ಡ್'ನಲ್ಲಿ ಬೆಂಕಿ ಅವಘಡ.. ಸುಟ್ಟು ಕರಕಲಾದ ಬೋಗಿ
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದೇ ವೇಳೆ ಯುವತಿಗೆ ಅವಳ ಮನೆಯಿಂದ(ಕೀನ್ಯಾದಿಂದ) ಕೊನೆಯ ಕರೆ ಬಂದ ಬಳಿಕ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದಕ್ಕೂ ಹಿಂದಿನ ರಾತ್ರಿ ಅವಳ ಸ್ನೇಹಿತರೊಂದಿಗೆ ಯುವತಿ ಕ್ರಿಸ್ಮಸ್ ಹಬ್ಬ ಆಚರಣೆ ಮಾಡಿದ್ದಳು. ಬಳಿಕ ಫ್ಲ್ಯಾಟ್ಗೆ ಬಂದಿದ್ದಾಳೆ. ಈ ವೇಳೆ ಕೀನ್ಯಾದಿಂದ ಕರೆ ಬಂದಿದೆ. ಬಳಿಕ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ.
ಯುವತಿಯ ಆತ್ಮಹತ್ಯೆಗೆ ನಿಖರ ಕಾರಣಗಳೇನು ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಯುವತಿ ವಾಸಿಸುತ್ತಿದ್ದ ಮನೆಯಲ್ಲಿಯೂ ಯಾವುದೇ ಡೆತ್ನೋಟ್ ಕೂಡ ಲಭ್ಯವಾಗಿಲ್ಲ. ಈ ಬಗ್ಗೆ ಅವಳ ಸ್ನೇಹಿತರಿಗೂ ಮಾಹಿತಿ ನೀಡಿದ್ದಲ್ಲದೇ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.