ಹೈದರಾಬಾದ್(ತೆಲಂಗಾಣ): ಕರ್ನಾಟಕ ಚುನಾವಣೆಯಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಪಕ್ಷ ಸ್ಪರ್ಧೆ ಮಾಡಲಿದೆ. ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಕರ್ನಾಟಕ ಮುಖ್ಯಮಂತ್ರಿಯಾಗಬೇಕೆಂದು ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಹೇಳಿದ್ದಾರೆ.
ಹೈದರಾಬಾದ್ನ ತೆಲಂಗಾಣ ಭವನದಲ್ಲಿ ಇಂದು ನಡೆದ ಭಾರತ ರಾಷ್ಟ್ರ ಸಮಿತಿ ಪಕ್ಷದ ಉದ್ಘಾಟನೆ ಮತ್ತು ಧ್ವಜ ಅನಾವರಣಗೊಳಿಸಿದ ಮಾತನಾಡಿದ ಕೆಸಿಆರ್, ಇದೇ ಡಿ.14ರಂದು ದೆಹಲಿಯಲ್ಲಿ ಬಿಎಸ್ಆರ್ ಕಚೇರಿಯನ್ನು ತೆರೆಯಲಾಗುವುದು. ಮುಂದಿನ ದಿನಗಳಲ್ಲಿ ಕೆಂಪು ಕೋಟೆಯ ಮೇಲೆ ಗುಲಾಬಿ ಬಾವುಟ ಹಾರಾಡಲಿದೆ ಎಂದರು.
ಚುನಾವಣೆಯಲ್ಲಿ ಗೆಲ್ಲಬೇಕಾದದ್ದು ಜನರೇ ಹೊರತು ರಾಜಕೀಯ ಪಕ್ಷಗಳಲ್ಲ. ದೇಶಕ್ಕೆ ಈಗ ಹೊಸ ಆರ್ಥಿಕ ನೀತಿಯ ಅಗತ್ಯವಿದೆ. ಕರ್ನಾಟಕ ಚುನಾವಣೆಯಲ್ಲಿ ಬಿಆರ್ಎಸ್ ಸ್ಪರ್ಧಿಸಲಿದೆ. ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾಗಬೇಕು. ಕರ್ನಾಟಕ-ತೆಲಂಗಾಣ ಗಡಿಯಲ್ಲಿ ತೆಲುಗು ಜನರಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಹೊಸ ಪರಿಸರ ನೀತಿ, ಮಹಿಳಾ ಸಬಲೀಕರಣಕ್ಕಾಗಿ ಹೊಸ ರಾಷ್ಟ್ರೀಯ ನೀತಿ ರೂಪುಗೊಳ್ಳಬೇಕು. ರಾಜ್ಯಗಳ ನಡುವೆ ನೀರಿಗಾಗಿ ಸಂಘರ್ಷ ಇರಬಾರದು ಎಂದರು.
ನಾನು ಪ್ರತಿ ಹಂತದಲ್ಲೂ ಅಪಹಾಸ್ಯ, ಅವಮಾನಗಳನ್ನು ಎದುರಿಸಿದ್ದೇನೆ. ಇದು ಸರ್ವೇಸಾಮಾನ್ಯ. ಅಪಹಾಸ್ಯಗಳನ್ನು ನಿರ್ಲಕ್ಷಿಸುವ ಅಗತ್ಯವಿಲ್ಲ. ಪ್ರತಿಕೂಲ ಪರಿಸ್ಥಿತಿಗಳನ್ನು ಮೆಟ್ಟಿ ನಿಂತು ತೆಲಂಗಾಣ ಸಾಧಿಸಿದ್ದೇವೆ. ತೆಲಂಗಾಣಕ್ಕಾಗಿ ಟಿಆರ್ಎಸ್ ಸ್ಥಾಪಿಸಿದ್ದ ಸಂದರ್ಭದಲ್ಲೂ ಹಲವರನ್ನು ಟೀಕಿಸಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ನಾಯಕ, ಕರ್ನಾಟಕದ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಖ್ಯಾತ ಚಿತ್ರನಟ ಪ್ರಕಾಶ್ ರಾಜ್, ತೆಲಂಗಾಣದ ಹಲವು ಸಚಿವರು, ಸಂಸದರು, ಶಾಸಕರು, ಎಂಎಲ್‌ಸಿಗಳು ಪಾಲ್ಗೊಂಡು ಕೆಸಿಆರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೇ, ಪಕ್ಷದ ಕಾರ್ಯಕರ್ತರು, ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಇದನ್ನೂ ಓದಿ: ಈಗ ನಮ್ದು 'ರಾಷ್ಟ್ರೀಯ ಪಕ್ಷ': ಕೇಜ್ರಿವಾಲ್ ಘೋಷಣೆ