ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ದೇಶದ ಕಣಿವೆ ನಾಡಿನ ಕಾಶ್ಮೀರಿ ಪಂಡಿತರಲ್ಲಿ ಮತ್ತೆ ಅಭದ್ರತೆ ಕಾಡಲು ಶುರುವಾಗಿದೆ. ಶ್ರೀನಗರ ಮೂಲದ ಸ್ಥಳೀಯ ಪಂಡಿತರ ಸಂಘಟನೆ ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ (ಕೆಪಿಎಸ್‌ಎಸ್) ಅಧ್ಯಕ್ಷ ಸಂಜಯ್ ಕುಮಾರ್ ಟಿಕೂ ತಮ್ಮ ಅಲ್ಪಸಂಖ್ಯಾತ ಸಮುದಾಯದ ಎಲ್ಲ ಸದಸ್ಯರಿಗೆ ಕಣಿವೆ ತೊರೆಯುವಂತೆ ಕರೆ ನೀಡಿದ್ದಾರೆ.
ಶೋಪಿಯಾನ್ ಜಿಲ್ಲೆಯ ಚೋಟಿಗಾಮ್ ಗ್ರಾಮದಲ್ಲಿ ಮಂಗಳವಾರ ಸುನೀಲ್ ಕುಮಾರ್ ಎಂಬುವವರನ್ನು ಉಗ್ರರು ಕೊಲೆ ಮಾಡಿದ್ದಾರೆ. ಅಲ್ಲದೇ, ಈತನ ಸಹೋದರ ಪಿತಾಂಬರ್ ಅಲಿಯಾಸ್ ಪಿಂಟು ಎಂಬುವವರ ಮೇಲೂ ದಾಳಿ ಮಾಡಿದ್ದಾರೆ. ಈ ಘಟನೆಯ ನಂತರ ಕಟ್ಟು ನಿಟ್ಟಿನ ಸಂದೇಶ ನೀಡಿರುವ ಸಂಜಯ್ ಕುಮಾರ್, ಎಲ್ಲ ಸ್ಥಳೀಯ ಪಂಡಿತರನ್ನು ಕಣಿವೆಯನ್ನು ತೊರೆಯುವಂತೆ ಕೇಳಿಕೊಂಡಿದ್ದಾರೆ.
ಕಾಶ್ಮೀರಿ ಕಣಿವೆಯಲ್ಲಿ ಯಾವುದೇ ಪಂಡಿತರು ಸುರಕ್ಷಿತವಾಗಿಲ್ಲ. ಪಂಡಿತರಿಗೆ ಕಾಶ್ಮೀರವನ್ನು ತೊರೆಯುವುದಷ್ಟೇ ಆಯ್ಕೆಯಾಗಿದೆ. ಇಲ್ಲವೇ ಸ್ಥಳೀಯ ಜನಸಂಖ್ಯೆಯ ಬೆಂಬಲ ಹೊಂದಿರುವ ಧಾರ್ಮಿಕ ಮತಾಂಧರಿಂದ ಹತ್ಯೆಗೀಡಾಗುವ ಆಯ್ಕೆ ಮಾತ್ರವೇ ಇದೆ ಎಂದು ತೀರ ಅಸಹಾಯಕ ಶಬ್ದಗಳಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಕಾಶ್ಮೀರದಲ್ಲಿ ಪ್ರವಾಸಿಗರು ಮತ್ತು ಅಮರನಾಥ ಯಾತ್ರಿಗಳು ಮಾತ್ರ ಸುರಕ್ಷಿತವಾಗಿದ್ದಾರೆ. ಆದರೆ, ಸ್ಥಳೀಯರಲ್ಲದ ಮುಸ್ಲಿಮರು ಮತ್ತು ಕಾಶ್ಮೀರಿ ಪಂಡಿತರು ಮಾತ್ರ ಈ ಭಯೋತ್ಪಾದಕರ ಗುರಿ. ಕಾಶ್ಮೀರಿ ಪಂಡಿತ ಸಮುದಾಯವನ್ನು ರಕ್ಷಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ತಮ್ಮ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಮತ್ತೊಂದೆಡೆ ಶೋಪಿಯಾನ್ ಜಿಲ್ಲೆಯ ಚೋಟಿಗಾಮ್ ಗ್ರಾಮದಲ್ಲಿ ನೆಲೆಸಿರುವ ಪಂಡಿತರು ಆತಂಕಗೊಂಡಿದ್ದಾರೆ. ಹೀಗಾಗಿಯೇ ತಮ್ಮನ್ನು ಕಾಶ್ಮೀರದಿಂದ ಜಮ್ಮುವಿಗೆ ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: ಕಾಶ್ಮೀರಿ ಪಂಡಿತ ಸಹೋದರರ ಮೇಲೆ ಉಗ್ರರ ದಾಳಿ.. ಓರ್ವ ಬಲಿ, ಮತ್ತೋರ್ವನ ಸ್ಥಿತಿ ಗಂಭೀರ