ಇಂದೋರ್(ಮಧ್ಯಪ್ರದೇಶ): ಇಲ್ಲಿ ಸಿಹಿತಿಂಡಿ ಅಂಗಡಿಯೊಂದಕ್ಕೆ ಕೊರಿಯರ್ ಮೂಲಕ ಬೆದರಿಕೆ ಪತ್ರವೊಂದು ಬಂದಿದ್ದು, ಪತ್ರದಲ್ಲಿರುವ ನವೆಂಬರ್ 28 ರಂದು ಇಡೀ ಇಂದೋರ್ ಬಾಂಬ್ ಸ್ಫೋಟದಿಂದ ತತ್ತರಿಸುತ್ತದೆ ವಾಕ್ಯ ಇದೀಗ ಇಡೀ ಇಂದೋರ್ ಅಲ್ಲಿ ಸಂಚಲನ ಮೂಡಿಸಿದೆ.
ಪತ್ರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇಂದೋರ್ಗೆ ಆಗಮಿಸಲಿದ್ದು, ಈ ವೇಳೆ ಇಲ್ಲಿ ಬಾಂಬ್ ಸಿಡಿಸಲಾಗುವುದು ಎಂದು ಬೆದರಿಕೆ ಹಾಕಲಾಗಿದೆ. ಪತ್ರ ಓದಿದ ಅಂಗಡಿ ಮಾಲೀಕ ಜುನಿ ಇಂದೋರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಾಹುಲ್ ಗಾಂಧಿ ಇಂದೋರ್ ಭೇಟಿ ವೇಳೆ ಖಾಲ್ಸಾ ಕಾಲೇಜು ಕ್ರೀಡಾಂಗಣದಲ್ಲಿ ರಾತ್ರಿ ವಿಶ್ರಾಂತಿ ಪಡೆಯಲಿದ್ದಾರೆ. ಈ ಹಿಂದೆ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಖಾಲ್ಸಾ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಅಲ್ಲಿನ ಸಿಖ್ ಸಮುದಾಯದಿಂದ ಅವರಿಗೆ ವಿರೋಧ ವ್ಯಕ್ತವಾಗಿತ್ತು. ಈ ವೇಳೆ ಕಮಲ್ ನಾಥ್ ಅವರೊಂದಿಗೆ ರಾಹುಲ್ ಗಾಂಧಿಯೂ ಇಲ್ಲಿ ಬರಬಾರದು ಎಂದು ಆ ಸಮುದಾಯ ಎಚ್ಚರಿಕೆ ನೀಡಿತ್ತು.
ಪತ್ರದಲ್ಲಿತ್ತು ಅಂಗಡಿಯ ಸರಿಯಾದ ವಿಳಾಸ: ಕೊರಿಯರ್ ಮೂಲಕ ಬಂದ ಪತ್ರದಲ್ಲಿ ಅಂಗಡಿಯ ಹೆಸರು ಶ್ರೀ ಗುಜರಾತ್ ಸ್ವೀಟ್ಸ್ ಬೆಂಗಾಲಿ ಸ್ವೀಟ್ಸ್, ಸಪ್ನಾ ಸಂಗೀತಾ ರೋಡ್ ಟವರ್ ಕ್ರಾಸ್‌ರೋಡ್ಸ್ ಮಾತ್ರವಲ್ಲದೇ ಪಿನ್ ಕೋಡ್ ಅನ್ನು ಸಹ ನಮೂದಿಸಲಾಗಿತ್ತು. ಅದೇ ಪತ್ರದಲ್ಲಿ 'ಸದ್ಗುರು ಪ್ರಸಾದಿ ಸಂತ ಶರಣ್ ಜೋ ಜನ್ ಪರ್ ಸೋ ಜನ್ ಉದಾಹರ್ ಸಂತ ಕಿ ನಿಂದಾ ನಾನಕ್ ಬಹುರ್ ಬಹುರ್ ಅವತಾರ' ಎಂದು ಬರೆಯಲಾಗಿದೆ. ಅದರಲ್ಲೂ ವಿಶೇಷವಾಗಿ ರಾಜಬಡಾವನ್ನು ಗುರಿಯಾಗಿಸಲಾಗುವುದು ಎಂದು ಹೇಳಲಾಗಿದೆ.
ನವೆಂಬರ್ ಕೊನೆಯ ವಾರದಲ್ಲಿ ಇಂದೋರ್‌ನ ವಿವಿಧ ಸ್ಥಳಗಳಲ್ಲಿ ಭೀಕರ ಬಾಂಬ್ ಸ್ಫೋಟಗಳು ನಡೆಯಲಿವೆ. ಬಾಂಬ್ ಸ್ಫೋಟಕ್ಕೆ ಇಡೀ ಇಂದೋರ್ ತತ್ತರಿಸಲಿದೆ. ಅತಿ ಶೀಘ್ರದಲ್ಲಿ ರಾಹುಲ್ ಗಾಂಧಿ ಇಂದೋರ್ಗೆ ಭೇಟಿ ನೀಡುವ ವೇಳೆ ಕಮಲ್ ನಾಥ್ ಅವರ ಮೇಲೂ ಗುಂಡು ಹಾರಿಸಲಾಗುತ್ತದೆ. ರಾಹುಲ್ ಗಾಂಧಿ ಅವರನ್ನೂ ರಾಜೀವ್ ಗಾಂಧಿ ಬಳಿ ಕಳುಹಿಸಲಾಗುವುದು ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಬೆದರಿಕೆ ಪತ್ರದಿಂದ ಎಚ್ಚರಿಕೆ ವಹಿಸಿರುವ ಪೊಲೀಸರು, ತನಿಖೆ ಆರಂಭಿಸಿದ್ದು, ಅಂಗಡಿ ಸುತ್ತಮುತ್ತ ಅಳವಡಿಸಿರುವ ಸಿಸಿಟಿವಿ ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: ಸಾವರ್ಕರ್ ಕ್ಷಮಾಪಣೆಯನ್ನ ಟೀಕಿಸಿದ ರಾಹುಲ್ ಗಾಂಧಿ: ಕೈ ನಾಯಕನ ವಿರುದ್ಧ ದೂರು ದಾಖಲು