ನವದೆಹಲಿ: ಜಗತ್ತಿನಾದ್ಯಂತ ಕೊರೊನಾ ವೈರಸ್ನ ಹೊಸ ರೂಪಾಂತರಿ 'ಒಮಿಕ್ರೋನ್' ಹರಡುವ ಭೀತಿ ಎದುರಾಗಿದ್ದು, ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದೆ.
ಡಿಸೆಂಬರ್ 1 ರಿಂದ ಈ ಮಾರ್ಗಸೂಚಿಗಳು ಜಾರಿಗೆ ಬರಲಿದ್ದು, ಹೊಸ ನಿಯಮಗಳು ಹೀಗಿವೆ..
1. ಪ್ರಯಾಣಿಕರು ವಿಮಾನವನ್ನು ಬುಕ್ ಮಾಡುವ ಮೊದಲು 'ಏರ್ ಸುವಿಧಾ ಪೋರ್ಟಲ್'ನಲ್ಲಿ ಫಾರ್ಮ್ ಅನ್ನು ತುಂಬಬೇಕು ಮತ್ತು ಹಿಂದಿನ 14 ದಿನಗಳ ಪ್ರಯಾಣದ ಮಾಹಿತಿಯನ್ನು ನಮೂದಿಸಬೇಕು.
2. ಆರ್ಟಿ-ಪಿಸಿಆರ್ ಪರೀಕ್ಷೆಯ ಫಲಿತಾಂಶವನ್ನು ಪ್ರಯಾಣದ ಮೊದಲು ಏರ್ ಸುವಿಧಾ ಪೋರ್ಟಲ್‌ಗೆ ಅಪ್‌ಲೋಡ್ ಮಾಡಬೇಕು. ಪ್ರಯಾಣ ಬೆಳೆಸುವ 72 ಗಂಟೆಗಳ ಒಳಗೆ ಪರೀಕ್ಷೆ ಮಾಡಿಸಿಕೊಂಡಿರಬೇಕು.
3. ಈಗಾಗಲೇ ಒಮಿಕ್ರೋನ್ ವರದಿಯಾಗಿರುವ, ಶಂಕಿತ ಕೇಸ್ಗಳು ಪತ್ತೆಯಾಗಿರುವ ದೇಶಗಳಿಂದ ಬರುವವರು ಭಾರತಕ್ಕೆ ಬಂದಿಳಿಯುತ್ತಿದ್ದಂತೆಯೇ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು. ವರದಿ ಬರುವವರೆಗೂ ವಿಮಾನ ನಿಲ್ದಾಣದಲ್ಲೇ ಕಾಯಬೇಕು.
4. ವರದಿ ನೆಗೆಟಿವ್ ಬಂದರೂ ಸಹ ಅವರನ್ನು ಏಳು ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತದೆ. ಅವರು ಎಂಟು ದಿನಗಳ ನಂತರ ಮತ್ತೆ ಪರೀಕ್ಷೆಗೊಳಗಾಗಬೇಕು. ಆಗ ಮತ್ತೆ ನೆಗೆಟಿವ್ ಬಂದ ಮೇಲೂ ಮುಂದಿನ ಏಳು ದಿನಗಳವರೆಗೆ ತಮ್ಮ ಮೇಲೆ ನಿಗಾ ಇರಿಸಿಕೊಳ್ಳಬೇಕು.
ಇದನ್ನೂ ಓದಿ: ಒಮಿಕ್ರೋನ್ ಆತಂಕ: ಸಭೆ ಕರೆದ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ.. ಕೇಜ್ರಿವಾಲ್ ಸರ್ಕಾರ ಕಟ್ಟೆಚ್ಚರ
B.1.1.529 ಎಂದು ಕರೆಯಲ್ಪಡುವ ಹೊಸ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದೆ. ವಿಶ್ವಸಂಸ್ಥೆ ಅದಕ್ಕೆ 'ಒಮಿಕ್ರೋನ್' ಎಂದು ಹೆಸರಿಟ್ಟಿದೆ. ಇದು ಮರುಸೋಂಕು, ಅಂದರೆ ಕೋವಿಡ್ನಿಂದ ಗುಣಮುಖರಾದವರಿಗೂ ಮತ್ತೆ ಅಂಟುವ ಅಪಾಯವನ್ನು ಸೂಚಿಸುತ್ತವೆ. ಇದೀಗ ಈ ರೂಪಾಂತರಿ ಕೇಸ್ಗಳು ಹಾಗೂ ಶಂಕಿತ ಪ್ರಕರಣಗಳು ಯುನೈಟೆಡ್ ಕಿಂಗ್‌ಡಮ್, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸ್‌ವಾನಾ, ಚೀನಾ, ಮಾರಿಷಸ್, ನ್ಯೂಜಿಲ್ಯಾಂಟ್, ಜಿಂಬಾಬ್ವೆ, ಸಿಂಗಾಪುರ, ಹಾಂಗ್ ಕಾಂಗ್ ಮತ್ತು ಇಸ್ರೇಲ್ ದೇಶಗಳಲ್ಲಿ ವರದಿಯಾಗಿವೆ.