ಶ್ರೀನಗರ (ಜಮ್ಮು-ಕಾಶ್ಮೀರ): ಇಲ್ಲಿನ ಕರ್ನಾಹ್ ಅರಣ್ಯ ಪ್ರದೇಶದಲ್ಲಿ 50 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಡ್ರಗ್ಸ್ ಅನ್ನು ವಶ ಪಡಿಸಿಕೊಳ್ಳಲಾಗಿದೆ. ಭಾರತೀಯ ಸೇನೆ, ಬಿಎಸ್‌ಎಫ್ ಮತ್ತು ಜೆ &ಕೆ ಪೊಲೀಸರ ಜಂಟಿ ತಂಡವು ನಿನ್ನೆ ರಾತ್ರಿ ತಂಗ್ದಾರ್ ಸೆಕ್ಟರ್ ಪ್ರದೇಶದಲ್ಲಿ ಡ್ರಗ್ಸ್ ಕಳ್ಳ ಸಾಗಾಣಿಕೆಯ ಪ್ರಯತ್ನ ವಿಫಲಗೊಳಿಸಿದ್ದಾರೆ.
ಒಟ್ಟು 10 ಕೆ.ಜಿ ತೂಕದ ಹೆರಾಯಿನ್ ಅನ್ನು ಕಾರ್ಯಾಚರಣೆ ವೇಳೆ ಜಪ್ತಿ ಮಾಡಲಾಗಿದ್ದು, ಇದರ ಮಾರುಕಟ್ಟೆ ಮೌಲ್ಯ ಸುಮಾರು 50 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.
ಗಡಿ ನಿಯಂತ್ರಣ ರೇಖೆಯ ಬಳಿಯೇ ಡ್ರಗ್ಸ್ ಸಾಗಾಣಿಕೆ ನಡೆಯುತ್ತಿದ್ದ ಕುರಿತು ಮಾಹಿತಿ ಹಿನ್ನೆಲೆ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ. ಇನ್ನು ಈ ಡ್ರಗ್ಸ್ ಸರಬರಾಜಿನಲ್ಲಿ ಸ್ಥಳೀಯ ವ್ಯಕ್ತಿಗಳ ಕೈವಾಡವಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದ್ದು, ಕಿಂಗ್ಪಿನ್ ಅನ್ನು ಸದ್ಯ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.