ಮುಂಬೈ (ಮಹಾರಾಷ್ಟ್ರ): ವೆಬ್ ಸಿರೀಸ್ ''ಸ್ಕೂಪ್'' ಬಿಡುಗಡೆಗೆ ತಡೆ ಕೋರಿ ಗ್ಯಾಂಗ್ಸ್ಟರ್ ರಾಜೇಂದ್ರ ನಿಕಾಲ್ಜೆ ಅಲಿಯಾಸ್ ಛೋಟಾ ರಾಜನ್ ಮಹಾರಾಷ್ಟ್ರದ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಶುಕ್ರವಾರ ಈ ಅರ್ಜಿ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯ ಛೋಟಾ ರಾಜನ್‌ಗೆ ಯಾವುದೇ ತುರ್ತು ಪರಿಹಾರ ನೀಡಲು ನಿರಾಕರಿಸಿದೆ. ಈಗಾಗಲೇ ನೆಟ್ಫ್ಲಿಕ್ಸ್ನಲ್ಲಿ ವೆಬ್ ಸಿರೀಸ್ ಬಿಡುಗಡೆಯಾಗಿದೆ ಎಂದು ಕೋರ್ಟ್ ಗಮನಿಸಿದೆ.
ನ್ಯಾಯಮೂರ್ತಿ ಎಸ್ಜಿ ಡಿಗೆ ಅವರ ರಜಾಕಾಲದ ಪೀಠವು ಅರ್ಜಿ ವಿಚಾರಣೆ ನಡೆಸಿ, ಹನ್ಸಲ್ ಮೆಹ್ತಾ ಮತ್ತು ನೆಟ್‌ಫ್ಲಿಕ್ಸ್ ಎಂಟರ್‌ಟೈನ್‌ಮೆಂಟ್ ಸರ್ವಿಸಸ್ ಇಂಡಿಯಾ ಸೇರಿದಂತೆ ವೆಬ್ ಸಿರೀಸ್ ತಯಾರಕರು ಮತ್ತು ನಿರ್ಮಾಪಕರಿಗೆ ಜೂನ್ 7ರೊಳಗೆ ಛೋಟಾ ರಾಜನ್ ಮನವಿಗೆ ಪ್ರತಿಕ್ರಿಯೆಯಾಗಿ ತಮ್ಮ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ಸೂಚಿಸಿತು.
ಈಗಾಗಲೇ ತಿಹಾರ್ ಜೈಲಿನಲ್ಲಿರುವ ಛೋಟಾ ರಾಜನ್ ಗುರುವಾರ ವೆಬ್ ಸಿರೀಸ್ಯ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದ. ತನ್ನ ಪೂರ್ವಾನುಮತಿ ಇಲ್ಲದೆ ತನ್ನ ವ್ಯಕ್ತಿತ್ವದ ಲಕ್ಷಣಗಳ ಬಳಕೆ ಅಥವಾ ದುರ್ಬಳಕೆಯು ವ್ಯಕ್ತಿತ್ವ ಹಕ್ಕುಗಳ ಉಲ್ಲಂಘನೆ ಮತ್ತು ಮಾನನಷ್ಟವಾಗಿದೆ ಎಂದು ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿ ವಿಚಾರಣೆ ವೇಳೆ ವೆಬ್ ಸಿರೀಸ್ ಬಿಡುಗಡೆ ಮಾಡಲಾಗಿದೆ ಮತ್ತು ಎಲ್ಲ ಆರು ಸಂಚಿಕೆಗಳು ಲಭ್ಯವಿವೆ ಎಂದು ನ್ಯಾಯಾಲಯಕ್ಕೆ ಗಮನಕ್ಕೆ ತರಲಾಯಿತು.
ಆಗ ರಾಜನ್ ಪರ ವಕೀಲ ಮಿಹಿರ್ ದೇಸಾಯಿ ವೆಬ್ ಸಿರೀಸ್ನಿಂದ ರಾಜನ್ ಹೆಸರು ಮತ್ತು ಚಿತ್ರವನ್ನು ತೆಗೆದುಹಾಕಲು ತಯಾರಕರಿಗೆ ನಿರ್ದೇಶನ ನೀಡಬಹುದು ಎಂದು ಹೇಳಿದರು. ಆದಾಗ್ಯೂ, ನ್ಯಾಯಮೂರ್ತಿಗಳು ರಾಜನ್‌ಗೆ ಯಾವುದೇ ಪರಿಹಾರವನ್ನು ನೀಡಲು ನಿರಾಕರಿಸಿದರು. ವೆಬ್ ಸಿರೀಸ್ ಈಗಾಗಲೇ ಬಿಡುಗಡೆಯಾಗಿದೆ. ಎಲ್ಲ ಸಂಚಿಕೆಗಳು ಪ್ರಕಟವಾಗಿವೆ.
ಮುಂದಿನ ದಿನಾಂಕದಂದು ನೋಡೋಣ. ಎಲ್ಲ ಪ್ರತಿವಾದಿಗಳು ತಮ್ಮ ಅಫಿಡವಿಟ್‌ಗಳನ್ನು ಸಲ್ಲಿಸಲಿ ಎಂದು ನ್ಯಾಯಮೂರ್ತಿಗಳು ಮುಂದಿನ ವಿಚಾರಣೆಯನ್ನು ಜೂನ್ 7ಕ್ಕೆ ಮುಂದೂಡಿದರು. ಇದೇ ವೇಳೆ ರಾಜನ್ ಕೋರಿದ ಪರಿಹಾರಗಳನ್ನು ಬದಲಾಯಿಸಲು ಮತ್ತು ಅದು ಹೇಗೆ ಬೌದ್ಧಿಕ ಹಕ್ಕುಗಳ ವಿಷಯವಾಗಿದೆ ಎಂಬುದನ್ನು ಸಮರ್ಥಿಸಲು ತನ್ನ ದಾವೆಯನ್ನು ತಿದ್ದುಪಡಿ ಮಾಡಲು ಪೀಠವು ಅನುಮತಿ ನೀಡಿತು.
ವಾದ - ಪ್ರತಿವಾದ: ಪತ್ರಕರ್ತ ಜ್ಯೋತಿರ್ಮಯ್ ಡೇ ಹತ್ಯೆ ಪ್ರಕರಣದಲ್ಲಿ ರಾಜನ್ ದೋಷಿಯಾಗಿದ್ದಾನೆ ಎಂದು ನೆಟ್‌ಫ್ಲಿಕ್ಸ್ ಪರವಾಗಿ ಹಾಜರಾದ ಹಿರಿಯ ವಕೀಲ ರವಿ ಕದಂ ನ್ಯಾಯಾಲಯಕ್ಕೆ ತಿಳಿಸಿದರು. ಇದರ ತೀರ್ಪು ಸಾರ್ವಜನಿಕವಾಗಿ ಲಭ್ಯವಿದೆ. ಅಂತಹ ಸಂದರ್ಭಗಳಲ್ಲಿ ಯಾರಾದರೂ ಅವರ ಹೆಸರು ಅಥವಾ ಚಿತ್ರವನ್ನು ಬಳಸಬಹುದು ಎಂದು ಕದಂ ಹೇಳಿದರು. ಆಗ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ರಾಜನ್ನನ್ನು ಖುಲಾಸೆಗೊಳಿಸಿದರೆ ಹೇಗೆ ಎಂದು ನ್ಯಾಯ ಪೀಠ ಪ್ರಶ್ನಿಸಿತು.
ಈ ವೇಳೆ ಮೇಲ್ಮನವಿಯು ಬಾಕಿ ಇರುವವರೆಗೆ ಒಬ್ಬ ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸುವ ಕೆಳ ನ್ಯಾಯಾಲಯದ ತೀರ್ಪು ಅಂತಿಮ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಕದಂ ಉಲ್ಲೇಖಿಸಿದರು. ಜೊತೆಗೆ ಪ್ರಕರಣದಲ್ಲಿ ತನಗೆ ಶಿಕ್ಷೆಯಾಗಿದೆ ಎಂಬ ಅಂಶದ ಬಗ್ಗೆ ರಾಜನ್ ವಿಷಾದಿಸುತ್ತಿಲ್ಲ. ಆದರೆ, ತನ್ನ ನಿಜವಾದ ಹೆಸರು ಮತ್ತು ಚಿತ್ರವನ್ನು ಬಳಸಲಾಗಿದೆ ಎಂದು ದೇಸಾಯಿ ನ್ಯಾಯಾಲಯಕ್ಕೆ ತಿಳಿಸಿದರು.
ಈ ಸಂದರ್ಭದಲ್ಲಿ ಇತರರೆಲ್ಲರ ಹೆಸರು ಮತ್ತು ಚಿತ್ರವನ್ನು ಬದಲಾಯಿಸಲಾಗಿದೆ. ರಾಜನ್ ಮೂಲ ಹೆಸರು ಮತ್ತು ಚಿತ್ರವನ್ನು ಮಾತ್ರ ಏಕೆ ಬಳಸಲಾಗಿದೆ ಎಂದು ರಾಜನ್ ಪರ ವಕೀಲ ದೇಸಾಯಿ ಪ್ರಶ್ನಿಸಿ, ರಾಜನ್ ಚಿತ್ರದ ಮೇಲೆ ಹಕ್ಕುಸ್ವಾಮ್ಯವನ್ನು ಹೊಂದಿದ್ದಾರೆ ಎಂದು ವಾದಿಸಿದರು.
ಏನಿದು ವೆಬ್ ಸಿರೀಸ್?: 2011ರ ಜೂನ್ನಲ್ಲಿ ಪತ್ರಕರ್ತ ಜ್ಯೋತಿರ್ಮಯ್ ಡೇ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ರಾಜನ್ ಮತ್ತು ಪತ್ರಕರ್ತೆ ಜಿಗ್ನಾ ವೋರಾ ಸೇರಿದಂತೆ 11 ಮಂದಿ ಆರೋಪಿಗಳಾಗಿದ್ದರು. 2018ರ ಮೇ ತಿಂಗಳಲ್ಲಿ ರಾಜನ್ ಮತ್ತು ಇತರ ಎಂಟು ಮಂದಿ ದೋಷಿ ಘೋಷಿಸಿದ್ದು, ವೋರಾ ಅವರನ್ನು ದೋಷಮುಕ್ತಗೊಳಿಸಲಾಯಿತು. ವೋರಾ ಅವರ "ಬಿಹೈಂಡ್ ಬಾರ್ಸ್ ಇನ್ ಬೈಕುಲ್ಲಾ: ಮೈ ಡೇಸ್ ಇನ್ ಪ್ರಿಸನ್'' ಪುಸಕ್ತನಿಂದ ಸ್ಫೂರ್ತಿ ಪಡೆದು "ಸ್ಕೂಪ್'' ಎಂಬ ವೆಬ್ ಸಿರೀಸ್ ತಯಾರಿಸಲಾಗಿದೆ. ರಾಜನ್ ಈ ವೆಬ್ ಸಿರೀಸ್ ಬಿಡುಗಡೆಗೆ ತಡೆ ಮತ್ತು ಟ್ರೇಲರ್ ತೆಗೆದುಹಾಕಲು ಆದೇಶಿಸುವಂತೆ ಕೋರಿದ್ದಾರೆ.
ಇದನ್ನೂ ಓದಿ: ಕಬ್ಬಡಿ ಪೋಸ್ಟರ್ನಲ್ಲಿ ಗ್ಯಾಂಗ್ಸ್ಟರ್ ಛೋಟಾ ರಾಜನ್ ಫೋಟೋ: 6 ಮಂದಿ ಬಂಧನ