ನವದೆಹಲಿ : ಮಣಿಪುರದಲ್ಲಿ ಮಹಿಳೆಯರಿಬ್ಬರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದನ್ನು ತೋರಿಸುವ ವಿಡಿಯೋವನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಗುರುವಾರ ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಿಗೆ ಸೂಚಿಸಿದೆ. ಪ್ರಕರಣವು ತನಿಖೆಯಲ್ಲಿರುವುದರಿಂದ ವೀಡಿಯೊಗಳನ್ನು ತೆಗೆದುಹಾಕಬೇಕೆಂದು ಸರ್ಕಾರ ತಿಳಿಸಿದೆ.
ಮೂಲಗಳ ಪ್ರಕಾರ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಭಾರತೀಯ ಕಾನೂನುಗಳಿಗೆ ಬದ್ಧವಾಗಿರುವುದು ಕಡ್ಡಾಯವಾಗಿದೆ ಎಂದು ಸರ್ಕಾರ ಹೇಳಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಿಂದ ವೀಡಿಯೊ ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಮೂಲಗಳ ಪ್ರಕಾರ, "ಇಬ್ಬರು ಮಣಿಪುರಿ ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡುವ ವೈರಲ್ ವೀಡಿಯೊವನ್ನು ಶೇರ್ ಮಾಡದಂತೆ ಸರ್ಕಾರ ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಆದೇಶ ನೀಡಿದೆ. ಈ ವಿಷಯವು ಪ್ರಸ್ತುತ ತನಿಖೆಯಲ್ಲಿರುವುದರಿಂದ ಸಾಮಾಜಿಕ ಮಾಧ್ಯಮ ವೇದಿಕೆಗಳು ಭಾರತೀಯ ಕಾನೂನುಗಳಿಗೆ ಬದ್ಧವಾಗಿರುವುದು ಕಡ್ಡಾಯವಾಗಿದೆ." ಎಂದು ಸರ್ಕಾರ ತಿಳಿಸಿದೆ.
ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ ಬೆತ್ತಲೆ ಮೆರವಣಿಗೆ ಮಾಡಿದ ಘಟನೆ ಮೇ 4 ರಂದು ಮಣಿಪುರದ ತೌಬಲ್ ಜಿಲ್ಲೆಯಲ್ಲಿ ನಡೆದಿದ್ದು, ಈ ವಿಷಯದಲ್ಲಿ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಕೆ ಮೇಘಚಂದ್ರ ಸಿಂಗ್, ಇಬ್ಬರು ಮಹಿಳೆಯರನ್ನು 2023ರ ಮೇ 4 ರಂದು ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಬೆತ್ತಲೆಯಾಗಿ ಪರೇಡ್ ಮಾಡಿದ ವಿಡಿಯೋಗೆ ಸಂಬಂಧಿಸಿದಂತೆ ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳ ವಿರುದ್ಧ ನಾಂಗ್‌ಪೋಕ್ ಸೆಕ್ಮೈ ಪೊಲೀಸ್ ಠಾಣೆಯಲ್ಲಿ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ತನಿಖೆ ಪ್ರಾರಂಭವಾಗಿದೆ ಮತ್ತು ರಾಜ್ಯದ ಪೊಲೀಸರು ಅಪರಾಧಿಗಳನ್ನು ಶೀಘ್ರವಾಗಿ ಬಂಧಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಈ ಕುರಿತು ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರೊಂದಿಗೆ ಮಾತನಾಡಿರುವುದಾಗಿ ಟ್ವೀಟ್ ಮಾಡಿದ್ದಾರೆ. “ಮಣಿಪುರದಲ್ಲಿ ನಡೆದ ಇಬ್ಬರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಭಯಾನಕ ವಿಡಿಯೋ ಖಂಡನೀಯ ಮತ್ತು ಅಮಾನವೀಯವಾಗಿದೆ. ಈ ಕುರಿತು ಸಿಎಂ ಎನ್.ಬಿರೇನ್ ಸಿಂಗ್ ಜಿ ಅವರೊಂದಿಗೆ ಮಾತನಾಡಿದ್ದು, ಅವರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ ಮತ್ತು ಅಪರಾಧಿಗಳನ್ನು ನ್ಯಾಯಾಂಗಕ್ಕೆ ತರಲು ಯಾವುದೇ ಪ್ರಯತ್ನವನ್ನು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ" ಎಂದು ಇರಾನಿ ಟ್ವೀಟ್ ಮಾಡಿದ್ದಾರೆ.
ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ನೆರೆದ ಜನಸಮೂಹ ಅವರ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ. ನಂತರ ಮಹಿಳೆಯರನ್ನು ಹೊಲಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಲಾಯಿತು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : Netflixಗೆ 59 ಲಕ್ಷ ಹೊಸ ಗ್ರಾಹಕರ ಸೇರ್ಪಡೆ; $8.2 ಶತಕೋಟಿ ಆದಾಯ