ನವದೆಹಲಿ: ಸತತವಾಗಿ ಕುಸಿಯುತ್ತಿರುವ ಪಾರ್ಸಿ ಜನಾಂಗದವರ ಜನಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ವಿಶೇಷ ಯೋಜನೆಯೊಂದನ್ನು ರೂಪಿಸಿದೆ.
ಮದುವೆ ವಯಸ್ಸಿಗೆ ಬರುವ ಅನೇಕ ಪಾರ್ಸಿ ಜನರು ಮದುವೆಯಾಗದೇ ಬ್ರಹ್ಮಚಾರಿಗಳಾಗಿ ಉಳಿಯುತ್ತಿರುವುದರಿಂದ ಈ ಸಮುದಾಯದ ಜನಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಅಂಕಿ - ಅಂಶಗಳ ಪ್ರಕಾರ ಪಾರ್ಸಿ ಜನಾಂಗದ ಶೇ 30ಕ್ಕೂ ಹೆಚ್ಚು ವಯಸ್ಕರು ಅವಿವಾಹಿತರಾಗಿ ಉಳಿದಿದ್ದಾರಂತೆ.
ಹೀಗಾಗಿ ಪಾರ್ಸಿಗಳ ಜನಸಂಖ್ಯೆ ಹೆಚ್ಚಿಸಲು ಕೇಂದ್ರ ಸರ್ಕಾರವು ಜಿಯೋ ಪಾರ್ಸಿ (Jiyo Parsi) ಎಂಬ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಪಾರ್ಸಿ ಮಹಿಳೆ ಮತ್ತು ಪುರುಷರಿಗೆ ಆನ್ಲೈನ್ ಡೇಟಿಂಗ್ ಮತ್ತು ವಿವಾಹ ಸಮಾಲೋಚನೆಗಳನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ.
ಈ ಯೋಜನೆಯ ಅನುಷ್ಠಾನ ಸಂಸ್ಥೆಗಳಲ್ಲಿ ಒಂದಾದ ಪಾರ್ಝೋರ್ ಫೌಂಡೇಶನ್‌ನ ನಿರ್ದೇಶಕ ಶೆರ್ನಾಜ್ ಕಾಮಾ ಮಾತನಾಡಿ, ಪಾರ್ಸಿ ಸಮುದಾಯದ ಜನರು ಮದುವೆಯಾಗುವಂತೆ ಮತ್ತು ಮಕ್ಕಳನ್ನು ಹೊಂದುವಂತೆ ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಈ ಸಮುದಾಯದಲ್ಲಿ ಒಟ್ಟು ಫಲವತ್ತತೆಯ ಪ್ರಮಾಣವು ಪ್ರತಿ ದಂಪತಿಗೆ 0.8 ಮಾತ್ರ ಆಗಿದೆ. ವರ್ಷಕ್ಕೆ ಸರಾಸರಿ 200 ರಿಂದ 300 ಮಕ್ಕಳು ಜನಿಸಿದರೆ, ಪ್ರತಿ ವರ್ಷ 800 ಜನ ಸಾಯುತ್ತಾರೆ. ಹಿಂದೂ, ಮುಸ್ಲಿಮ್, ಸಿಖ್ ಮತ್ತು ಕ್ರಿಶ್ಚಿಯನ್ನರ ಪರಿಸ್ಥಿತಿಗೆ ಹೋಲಿಸಿದರೆ ಜನಸಂಖ್ಯೆ ವಿಷಯದಲ್ಲಿ ಪಾರ್ಸಿಗಳ ಸ್ಥಿತಿ ಶೋಚನೀಯವಾಗಿದೆ ಎಂದರು.
ಅರ್ಧಕ್ಕರ್ಧ ಕುಸಿದ ಜನಸಂಖ್ಯೆ: ಹೊಸ ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಮೀಕ್ಷೆ (NHFWS) ಪ್ರಕಾರ, ಒಟ್ಟು ಫಲವತ್ತತೆ ಪ್ರಮಾಣವು ಹಿಂದೂ ಸಮುದಾಯದಲ್ಲಿ 1.94, ಮುಸ್ಲಿಂ ಸಮುದಾಯದಲ್ಲಿ 2.36, ಕ್ರಿಶ್ಚಿಯನ್ ಸಮುದಾಯದಲ್ಲಿ 1.88 ಮತ್ತು ಸಿಖ್ ಸಮುದಾಯದಲ್ಲಿ 1.61 ಆಗಿದೆ. 2011 ರ ಜನಗಣತಿಯ ಪ್ರಕಾರ, ದೇಶದಲ್ಲಿ ಪಾರ್ಸಿ ಸಮುದಾಯದ ಜನಸಂಖ್ಯೆ 57,264 ರಷ್ಟಿದ್ದು, 1941 ರಲ್ಲಿ ಇದು 1,14,000 ಆಗಿತ್ತು.
ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಪಾರ್ಸಿ ಸಮುದಾಯದ ಜನಸಂಖ್ಯೆಯನ್ನು ಸಮತೋಲನಗೊಳಿಸಲು ಮತ್ತು ಒಟ್ಟು ಫಲವತ್ತತೆ ದರವನ್ನು ಹೆಚ್ಚಿಸುವ ಉದ್ದೇಶದಿಂದ ನವೆಂಬರ್ 2013 ರಲ್ಲಿ 'ಜಿಯೋ ಪಾರ್ಸಿ' ಯೋಜನೆಯನ್ನು ಪ್ರಾರಂಭಿಸಿತು. ಇದಕ್ಕಾಗಿ ಪ್ರತಿ ವರ್ಷ 4 ರಿಂದ 5 ಕೋಟಿ ರೂಪಾಯಿ ಬಜೆಟ್ ನೀಡಲಾಗುತ್ತಿದೆ.
ಯೋಜನೆ ಆರಂಭದ ಬಳಿಕ ಬಂದ ಫಲಿತಾಂಶ ಏನು?: ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ ಜುಲೈ 15 ರವರೆಗೆ 376 ಶಿಶುಗಳು ಜನಿಸಿವೆ. ಇದು ಪ್ರತಿ ವರ್ಷ ಪಾರ್ಸಿ ಸಮುದಾಯದಲ್ಲಿ ಜನಿಸುವ ಸರಾಸರಿ 200 ಶಿಶುಗಳಿಗಿಂತ ಹೆಚ್ಚು ಎಂದು ಕಾಮಾ ತಿಳಿಸಿದರು. ಸಮುದಾಯದಲ್ಲಿ ಕಡಿಮೆ ಜನನ ಪ್ರಮಾಣಕ್ಕೆ ಅವಿವಾಹಿತ ವಯಸ್ಕರೇ ದೊಡ್ಡ ಕಾರಣ ಎಂದು ಅವರು ಹೇಳಿದರು.
ಪಾರ್ಸಿ ಸಮುದಾಯದ ಸುಮಾರು 30 ಪ್ರತಿಶತ ವಯಸ್ಕರು ವಿವಾಹಕ್ಕೆ ಅರ್ಹರಾಗಿದ್ದರೂ ಅವಿವಾಹಿತರಾಗಿದ್ದಾರೆ ಎಂಬುದು ಅಧ್ಯಯನದಲ್ಲಿ ಕಂಡುಬಂದಿದೆ. ಮದುವೆಯಾದವರಲ್ಲಿ ಸುಮಾರು ಶೇ 30 ರಷ್ಟು ಜನ ಸರಾಸರಿ ತಲಾ ಒಂದು ಮಗುವನ್ನು ಹೊಂದಿದ್ದಾರೆ. ಇನ್ನು ಸಮುದಾಯದ ಶೇ 30 ರಷ್ಟು ಜನ 65 ವರ್ಷಕ್ಕಿಂತ ಮೇಲ್ಪಟ್ಟವರು. ಪಾರ್ಸಿ ಸಮುದಾಯದಲ್ಲಿ ಮದುವೆಯಾಗುವ ಮಹಿಳೆಯರ ಸರಾಸರಿ ವಯಸ್ಸು 28 ವರ್ಷ ಮತ್ತು ಪುರುಷರ ವಯಸ್ಸು 31 ವರ್ಷಗಳು ಎಂದು ಕಾಮಾ ತಿಳಿಸಿದರು.
ಪಾರ್ಸಿ ಸಮುದಾಯದ ಯುವಕರು ಅದರಲ್ಲೂ ಮುಖ್ಯವಾಗಿ ಮಹಿಳೆಯರು ಸ್ವಾತಂತ್ರ್ಯದಿಂದ ಬದುಕಬೇಕೆಂಬ ಭಾವನೆ ಹೊಂದಿರುವುದೇ ಮದುವೆಯಾಗದಿರಲು ಪ್ರಮುಖ ಕಾರಣವಾಗಿದೆ. ವಯಸ್ಸಾದವರನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಅವರ ಮೇಲಿದ್ದು, ಇದು ಮದುವೆಯಾಗಲು ಸಾಧ್ಯವಾಗದಿರುವ ಇನ್ನೊಂದು ಕಾರಣವಾಗಿದೆ.
ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂದರೆ - ಪ್ರತಿ ಯುವ ದಂಪತಿಯು ಎಂಟು ಜನ ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದಾರೆ. ಸರ್ಕಾರವು 10 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿರುವ ಜನರಿಗೆ ಮಾಸಿಕ 4,000 ರೂಪಾಯಿ ಸಹಾಯಧನ ನೀಡುತ್ತದೆ, ಆದರೆ ಇದು ಸಾಕಾಗುವುದಿಲ್ಲ ಎನ್ನುತ್ತಾರೆ ಲೇಡಿ ಶ್ರೀ ರಾಮ್ ಕಾಲೇಜಿನ ಸಹ ಪ್ರಾಧ್ಯಾಪಕರೂ ಆಗಿರುವ ಶೆರ್ನಾಜ್ ಕಾಮಾ.
ಜಿಯೋ ಪಾರ್ಸಿ ಯೋಜನೆಯಡಿ ನಡೆಸಿದ ಪ್ರಯತ್ನದಿಂದಾಗಿ 2020 ರಲ್ಲಿ 61 ಮಕ್ಕಳು ಮತ್ತು 2021 ರಲ್ಲಿ 60 ಮಕ್ಕಳು ಜನಿಸಿವೆ ಎಂದು ಅವರು ಹೇಳಿದರು.