ಮುಂಬೈ (ಮಹಾರಾಷ್ಟ್ರ): ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ ಆರೋಪ ಪ್ರಕರಣ ಸಂಬಂಧ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ಪತ್ನಿ ಟೀನಾ ಅಂಬಾನಿ ಜಾರಿ ನಿರ್ದೇಶನಾಲಯ (ಇಡಿ)ದ ಮುಂದೆ ಹಾಜರಾದರು. ದಕ್ಷಿಣ ಮುಂಬೈನ ಇಡಿ ಕಚೇರಿಯಲ್ಲಿ ವಿಚಾರಣೆಗೆ ಒಳಗಾದ ಅವರು ತಮ್ಮ ಹೇಳಿಕೆ ದಾಖಲಿಸಿದರು.
ಸೋಮವಾರವಷ್ಟೇ ರಿಲಯನ್ಸ್ ಎಡಿಎ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದರು. ವಿದೇಶಿ ವಿನಿಮಯ ಕಾನೂನು ಉಲ್ಲಂಘನೆಗೆ ಸಂಬಂಧಿಸಿದ ತನಿಖೆ ಕುರಿತು ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಟೀನಾ ಅಂಬಾನಿ ಸಹ ವಿಚಾರಣೆಗೆ ಹಾಜರಾದರು. ಇಡಿ ಮೂಲಗಳ ಪ್ರಕಾರ, ವಿದೇಶದಲ್ಲಿ ಕೆಲವು ಬಹಿರಂಗಪಡಿಸದ ಆಸ್ತಿಗಳನ್ನು ಹೊಂದಿರುವ ಮತ್ತು ಹಣದ ಚಲನೆಗೆ ಸಂಬಂಧಿಸಿದಂತೆ ಅಂಬಾನಿ ದಂಪತಿ ವಿರುದ್ಧ ತನಿಖೆ ನಡೆಸಲಾಗುತ್ತದೆ. ಜರ್ಸಿ, ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ ಮತ್ತು ಸೈಪ್ರಸ್ ಮೂಲದ ಕೆಲವು ಕಡಲಾಚೆಯ ಕಂಪನಿಗಳೊಂದಿಗೆ ನಂಟು ಹೊಂದಿರುವ ಆರೋಪ ಸಹ ಅನಿಲ್ ಅಂಬಾನಿ ಮೇಲೆ ಇದ್ದು, ಈ ಬಗ್ಗೆ ಜಾರಿ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಪ್ರಕರಣ: ಹೈಕೋರ್ಟ್‌ನಿಂದ ವಿಭಿನ್ನ ತೀರ್ಪು.. ತ್ರಿಸದಸ್ಯ ಪೀಠ ರಚಿಸಲು ಸುಪ್ರೀಂ ಸೂಚನೆ
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾದ ಹೊಸ ಪ್ರಕರಣದ ಭಾಗವಾಗಿ ಅನಿಲ್ ಅಂಬಾನಿ ಸೋಮವಾರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿತ್ತು. ಯೆಸ್ ಬ್ಯಾಂಕ್ ಪ್ರವರ್ತಕ ರಾಣಾ ಕಪೂರ್ ಮತ್ತು ಇತರರ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣದಲ್ಲೂ ಅನಿಲ್ ಅಂಬಾನಿ 2020ರಲ್ಲಿ ಇಡಿ ಮುಂದೆ ಹಾಜರಾಗಿದ್ದರು. ರಿಲಯನ್ಸ್ ಗ್ರೂಪ್ ಕಂಪನಿಗಳು ಎಸ್ ಬ್ಯಾಂಕ್ ನಿಂದ ಅಂದಾಜು ರೂ.12,800 ಕೋಟಿ ಸಾಲ ಪಡೆದಿವೆ. ಸಮಯಕ್ಕೆ ಸರಿಯಾಗಿ ಪಾವತಿ ಮಾಡದ ಆರೋಪದ ಮೇಲೆ ಅನಿಲ್ ಅಂಬಾನಿ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.
ಅಲ್ಲದೇ, ಆ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯವು ರಾಣಾ ಕಪೂರ್ಗೆ ಸೇರಿದ 127 ಕೋಟಿ ರೂ. ಮೌಲ್ಯದ ಫ್ಲಾಟ್ ವಶಪಡಿಸಿಕೊಂಡಿತ್ತು. ಲಂಡನ್‌ನ 77 ಸೌತ್ ಆಡ್ಲಿ ಸ್ಟ್ರೀಟ್‌ನಲ್ಲಿರುವ ಅಪಾರ್ಟ್‌ಮೆಂಟ್ -1ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿತ್ತು. ಮತ್ತೊಂದೆಡೆ, ಕಳೆದ ವರ್ಷ ಆಗಸ್ಟ್‌ನಲ್ಲಿ ಎರಡು ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ 814 ಕೋಟಿ ರೂ.ಗೂ ಅಧಿಕ ಮೊತ್ತದ ಅಘೋಷಿತ ಹಣದ ಮೇಲಿನ 420 ಕೋಟಿ ತೆರಿಗೆ ವಂಚನೆ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ಅಂಬಾನಿ ಅವರಿಗೆ ಕಪ್ಪುಹಣ ತಡೆ ಕಾನೂನಿನಡಿ ನೋಟಿಸ್ ಜಾರಿ ಮಾಡಿತ್ತು. ಬಳಿಕ ಮಾರ್ಚ್‌ನಲ್ಲಿ ಐಟಿ ಶೋಕಾಸ್ ನೋಟಿಸ್ ಮತ್ತು ದಂಡದ ಹಾಕುವ ಪ್ರಸ್ತಾವನೆಗೆ ಬಾಂಬೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಇದನ್ನೂ ಓದಿ: Job scam: ಶಿಕ್ಷಕರ ನೇಮಕಾತಿ ಹಗರಣ; ನಟ, ನಟಿಗೆ ಆರೋಪಿ ಕುಂತಲ್ ಐಷಾರಾಮಿ ಕಾರು ಗಿಫ್ಟ್, ನಟಿಗೆ 11 ಗಂಟೆ ವಿಚಾರಣೆ