ಎರ್ನಾಕುಲಂ (ಕೇರಳ): ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಪುರಾತನ ವಸ್ತುಗಳ ಮಾರಾಟಗಾರ ಮಾನ್ಸನ್ ಮಾವುಂಕಲ್ ತಪ್ಪಿತಸ್ಥ ಎಂದು ಪೋಕ್ಸೊ ಕೋರ್ಟ್ ತೀರ್ಪು ನೀಡಿದೆ. ಮಹಿಳಾ ಉದ್ಯೋಗಿಯೊಬ್ಬರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮಾನ್ಸನ್ ಮಾವುಂಕಲ್ ಮೇಲಿತ್ತು. ಅಪ್ರಾಪ್ತೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿದ ಎರ್ನಾಕುಲಂ ಜಿಲ್ಲಾ ಪೋಕ್ಸೊ ನ್ಯಾಯಾಲಯ ಇಂದು ತೀರ್ಪು ನೀಡಿದೆ.
ಮಾನ್ಸನ್ ಮಾವುಂಕಲ್ ವಿರುದ್ಧದ ಎಲ್ಲಾ ಆರೋಪಗಳು ಸಾಬೀತಾಗಿವೆ. ಮಾನ್ಸನ್ ಮಾವುಂಕಲ್ ಸಂತ್ರಸ್ತೆಯ ಮೇಲೆ ದೌರ್ಜನ್ಯ ಎಸಗಿರುವುದು ಪ್ರಕರಣದಲ್ಲಿ ಕಂಡು ಬಂದಿದೆ ಎಂದು ಕೋರ್ಟ್ ಹೇಳಿದೆ. 2019 ರಲ್ಲಿ ಪ್ರಕರಣ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಶಿಕ್ಷೆ ಶೀಘ್ರದಲ್ಲೇ ಪ್ರಕಟವಾಗಲಿದೆ. ಇದೇ ವೇಳೆ ಪ್ರಕರಣದಲ್ಲಿ ಕೇರಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕೆ. ಸುಧಾಕರನ್ ಕೂಡ ಭಾಗಿಯಾಗಿದ್ದಾರೆ ಎಂಬ ಆರೋಪವಿದ್ದು, ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ.
ಈ ಹಿಂದೆ ನಡೆದ ವಿಚಾರಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯಗಳ ಪ್ರಕರಣದಲ್ಲಿ ಮಾನ್ಸನ್ ಮಾವುಂಕಲ್ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿತ್ತು. ಮಾನ್ಸನ್ ಮಾವುಂಕಲ್ ಅವರ ಪರವಾಗಿ ವಾದ ಮಂಡಿಸಿದ್ದ ವಕೀಲರು, ಪೊಲೀಸರು ಪ್ರಕರಣದಲ್ಲಿ ಹೆಚ್ಚು ಆಸ್ಥೆ ತೋರುತ್ತಿದ್ದಾರೆ. ಅರ್ಜಿದಾರರ ವಿರುದ್ಧ ಪೂರ್ವಾಗ್ರಹ ಪೀಡಿತರಾಗಿದ್ದಾರೆ. ಹಣ, ರಾಜಕೀಯ ಮತ್ತು ಪೊಲೀಸ್ ಬಲವು ಅರ್ಜಿದಾರರನ್ನು ಕಂಬಿಗಳ ಹಿಂದೆ ತಳ್ಳಲು ನೋಡುತ್ತಿವೆ ಎಂದು ವಾದಿಸಿದ್ದರು.
ಅತ್ಯಾಚಾರ ಆರೋಪ, ರಾಜೀನಾಮೆ ನೀಡಿದ್ದ ಬಿಷಪ್.. ಮತ್ತೊಂದೆಡೆ ಇತ್ತೀಚೆಗೆ ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರವೆಸಗಿದ ಕೇಸ್ನ ಆರೋಪಿ ಫ್ರಾಂಕೋ ಮುಲಕ್ಕಲ್ ಅವರು ಬಿಷಪ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಮುಲಕ್ಕಲ್ ರಾಜೀನಾಮೆಯನ್ನು ಪೋಪ್ ಫ್ರಾನ್ಸಿಸ್ ಅಂಗೀಕರಿಸಿದ್ದರು. ಈ ಅತ್ಯಾಚಾರ ಆರೋಪದ ನಂತರ ಮುಲಕ್ಕಲ್ ಅವರನ್ನು ಗ್ರಾಮೀಣ ಕರ್ತವ್ಯಗಳಿಂದ ತೆಗೆದು ಹಾಕಲಾಗಿತ್ತು.
ಇದು ಕೊಟ್ಟಾಯಂ ಜಿಲ್ಲೆಯ ಸನ್ಯಾಸಿನಿಯೊಬ್ಬರ ಮೇಲೆ ನಡೆದಿದ್ದ ಅತ್ಯಾಚಾರ ಆರೋಪ ಪ್ರಕರಣವಾಗಿದ್ದು, 2014-2016 ರ ಅವಧಿಯಲ್ಲಿ ತನ್ನ ಮೇಲೆ ಕೃತ್ಯ ನಡೆದಿದೆ ಎಂದು ದೂರು ನೀಡಿದ್ದರು. ಈ ಸಂತ್ರಸ್ತೆಯ ಸಹೋದ್ಯೋಗಿಗಳು ನಾಗರಿಕ ಸಮಾಜದ ಸದಸ್ಯರೊಂದಿಗೆ ಸೇರಿ ಬಿಷಪ್ ಬಂಧನಕ್ಕೆ ಆಗ್ರಹಿಸಿ ಆಂದೋಲನ ನಡೆಸಿದ್ದರು. ನಂತರ ಬಿಷಪ್ ಅವರನ್ನು ಪೊಲೀಸರು ಬಂಧಿಸಿದ್ದರು. ಅತ್ಯಾಚಾರ ಪ್ರಕರಣದಲ್ಲಿ ಬಂಧಿಲ್ಪಟ್ಟ ಭಾರತದ ಮೊದಲ ಕ್ಯಾಥೋಲಿಕ್ ಬಿಷಪ್ ಎಂಬ ಕುಖ್ಯಾತಿಗೆ ಮುಲಕ್ಕಲ್ ಒಳಗಾಗಿದ್ದರು.
ಇದನ್ನೂ ಓದಿ: PUBG Game ಮೂಲಕ ಸ್ನೇಹ.. ಬಾಲಕಿ ಅಪಹರಿಸಲು ಯತ್ನಿಸಿದ ಯುವಕರಿಬ್ಬರ ಬಂಧನ