ಜಮ್ಮು: ಮುಂದಿನ ವಾರ ನಡೆಯುವ ಗಣರಾಜ್ಯೋತ್ಸವ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ತಲುಪಲು ಇನ್ನೆರಡು ದಿನ ಬಾಕಿ ಇರುವ ಮಧ್ಯೆಯೇ ಜಮ್ಮು ನಗರದ ಹೊರವಲಯದಲ್ಲಿರುವ ನರ್ವಾಲ್ನ ಜನನಿಬಿಡ ಕೈಗಾರಿಕಾ ಪ್ರದೇಶದಲ್ಲಿ ಸುಧಾರಿತ ಕಚ್ಛಾ ಸ್ಫೋಟಕ (ಐಇಡಿ)ದಿಂದ ಅವಳಿ ಸ್ಫೋಟ ನಡೆದಿದೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ.
ಗಣರಾಜ್ಯೋತ್ಸವಕ್ಕೆ ಕೆಲವೇ ದಿನಗಳಿಗೂ ಮುನ್ನ ಸ್ಫೋಟ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಭದ್ರತಾ ಪಡೆಗಳು ನರ್ವಾಲ್ ಸೇರಿದಂತೆ ಜಮ್ಮುವಿನಲ್ಲಿ ಕಟ್ಟೆಚ್ಚರ ವಹಿಸಿವೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಕಥುವಾದಿಂದ ಜಮ್ಮು ಮಾರ್ಗವಾಗಿ ಶ್ರೀನಗರಕ್ಕೆ ತೆರಳಲಿದ್ದು, ಭದ್ರತೆ ಹೆಚ್ಚಿಸಲಾಗಿದೆ. ಸ್ಫೋಟದ ಉದ್ವಿಗ್ನತೆ ಮಧ್ಯೆಯೂ ರಾಹುಲ್ ಗಾಂದಿ ಅವರಿಂದು ಕಥುವಾದಿಂದ ಯಾತ್ರೆ ಮುಂದುವರಿಸಿದ್ದಾರೆ.
ಮೊದಲ ಸ್ಫೋಟ: ಶಂಕಿತ ಭಯೋತ್ಪಾದಕರು ಜಮ್ಮು ನಗರದಿಂದ 5 ಕಿಮೀ ದೂರದಲ್ಲಿರುವ ನರ್ವಾಲ ಪ್ರದೇಶದಲ್ಲಿ ಕಾರು ದುರಸ್ತಿ ಮಾಡುವ ಅಂಗಡಿಯ ಹೊರಗೆ ನಿಲ್ಲಿಸಿದ್ದ ಹಳೆಯ ಬೊಲೆರೊ ಕಾರಿನಲ್ಲಿ ಮತ್ತು ಇನ್ನೊಂದು ವಾಹನದಲ್ಲಿ ಐಇಡಿಗಳನ್ನು ಇಟ್ಟಿದ್ದರು. ಕಾರಿನಲ್ಲಿದ್ದ ಐಇಡಿ ಮೊದಲು ಸ್ಫೋಟಗೊಂಡಿದ್ದು, ಸಮೀಪದಲ್ಲಿ ನಿಂತಿದ್ದ ಐವರು ಗಾಯಗೊಂಡಿದ್ದಾರೆ.
ಎರಡನೇ ಸ್ಫೋಟ: ಎರಡನೇ ಐಐಡಿ 50 ಮೀಟರ್ ದೂರದಲ್ಲಿ 10 ನಿಮಿಷಗಳ ಅಂತರದಲ್ಲಿ ಸಿಡಿದು, ಇನ್ನೂ ನಾಲ್ವರು ಗಾಯಗೊಂಡಿದ್ದಾರೆ. ಎಲ್ಲ ಗಾಯಾಳುಗಳನ್ನು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೆಚ್ಚುವರಿ ಡಿಜಿಪಿ ಮುಖೇಶ್ ಸಿಂಗ್ ಮಾಹಿತಿ ನೀಡಿದರು.
ಲಷ್ಕರ್- ಎ-ತೊಯ್ಬಾ ಕೃತ್ಯ ಶಂಕೆ: ಎರಡು ಐಇಡಿ ಸ್ಫೋಟದ ಹಿಂದೆ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಇದಕ್ಕೂ ಮೊದಲು ಉಧಮ್‌ಪುರದಲ್ಲಿ ನಡೆಸಿದ ದಾಳಿ ಮಾದರಿಯಲ್ಲಿ ನರ್ವಾಲದಲ್ಲಿ ಸ್ಫೋಟ ನಡೆಸಲಾಗಿದೆ. ಉಗ್ರರು ಅದೇ ಮಾದರಿಯಲ್ಲಿ ಕೃತ್ಯ ಎಸಗಿದ್ದಾರ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯನ್ನು ಕುರಿತು ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಖಂಡಿಸಿದ್ದಾರೆ. ತಪ್ಪಿತಸ್ಥರನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತುರ್ತು ಕ್ರಮಕ್ಕೆ ಸೂಚಿಸಿದ್ದಾರೆ. "ಇಂತಹ ಕೃತ್ಯಗಳು ಹೊಣೆಗೇಡಿಗಳ ಹತಾಶೆ ಮತ್ತು ಹೇಡಿತನವನ್ನು ತೋರಿಸುತ್ತವೆ. ತಕ್ಷಣವೇ ದೃಢವಾದ ಕ್ರಮ ತೆಗೆದುಕೊಳ್ಳಿ. ಅಪರಾಧಿಗಳನ್ನು ಶಿಕ್ಷೆಯ ಕಟಕಟೆಗೆ ತನ್ನಿ" ಎಂದು ಭದ್ರತಾ ಪಡೆಗಳಿಗೆ ಸೂಚಿಸಿದ್ದಾರೆ. ಸ್ಫೋಟದಿಂದಾಗಿ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಲೆಫ್ಟಿನೆಂಟ್ ಗವರ್ನರ್ ಘೋಷಿಸಿದ್ದಾರೆ.
ಭೀತಿ ನಡುವೆ ರಾಹುಲ್ ಗಾಂಧಿ ಯಾತ್ರೆ: ಜಮ್ಮುವಿನ ನರ್ವಾಲದಲ್ಲಿ ಅವಳಿ ಸ್ಫೋಟದ ಭೀತಿಯ ಮಧ್ಯೆಯೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯನ್ನು ಮುಂದುವರಿಸಿದ್ದಾರೆ. ಪಂಜಾಬ್ ಮೂಲಕ ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯನ್ನು ಪ್ರವೇಶಿಸಿರುವ ಯಾತ್ರೆ ಇಂದು ಕಥುವಾ ಜಿಲ್ಲೆಯ ಹೀರಾನಗರ ಮೋರ್‌ನಿಂದ ಮುಂದುವರಿದಿದೆ. ಮೆರವಣಿಗೆಯು ಸಾಂಬಾದ ದುಗ್ಗರ್ ಹವೇಲಿಯಿಂದ ಸಾಗಿ, ಚಕ್ ನಾನಕ್ ಗ್ರಾಮದಲ್ಲಿ ತಂಗಲಿದೆ.
ರಾಹುಲ್ ಗಾಂಧಿ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ಅಲ್ಲಿಯೇ ವಿಶ್ರಾಂತಿ ಹೂಡಲಿದ್ದಾರೆ. ಭಾರತ್ ಜೋಡೋ ಯಾತ್ರೆ ಜಮ್ಮುವಿನಿಂದ ಸುಮಾರು 70 ಕಿಮೀ ದೂರದಲ್ಲಿದೆ. ಇನ್ನೆರಡು ದಿನಗಳಲ್ಲಿ ಜಮ್ಮು ತಲುಪಲಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಜಮ್ಮು ಮಾರ್ಗವಾಗಿ ಶ್ರೀನಗರಕ್ಕೆ ತೆರಳಿ ಜನವರಿ 30 ರಂದು ಯಾತ್ರೆ ಸಂಪನ್ನವಾಗಲಿದೆ. ಇನ್ನೆರಡೇ ದಿನಗಳಲ್ಲಿ ಜಮ್ಮು ತಲುಪಲಿರುವ ಯಾತ್ರೆಗೆ ಸ್ಫೋಟದ ಭೀತಿ ಎದುರಾಗಿದೆ. ನರ್ವಾಲದಲ್ಲಿ ನಡೆದ ಅವಳಿ ಸ್ಫೋಟದಿಂದಾಗಿ ಪಾದಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು, ಸಿಆರ್‌ಪಿಎಫ್ ಸೇರಿದಂತೆ ಭದ್ರತಾ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದ ಕಥುವಾದಲ್ಲಿ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆಗೆ ಬಿಗಿ ಭದ್ರತೆ