ರಾಜಸ್ಥಾನ: ಜೈಪುರದ ಎನ್‌ಆರ್‌ಐ ಸರ್ಕಲ್‌ನಲ್ಲಿ ತರಕಾರಿ ಖರೀದಿಸಲು ಹೋಗಿದ್ದ ರಾಜಸ್ಥಾನದ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಗೋಪಾಲ್ ಕೇಶಾವತ್ ಅವರ ಪುತ್ರಿಯನ್ನು ಅಪಹರಿಸಲಾಗಿದೆ. ಈ ಕುರಿತು ಪ್ರತಾಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಸಂಜೆ 5:30 ರ ಸುಮಾರಿಗೆ ಅಭಿಲಾಷಾ (21) ಎನ್‌ಆರ್‌ಐ ಸರ್ಕಲ್‌ನಲ್ಲಿ ತರಕಾರಿ ಖರೀದಿಸಲು ಸ್ಕೂಟಿಯಲ್ಲಿ ಹೋಗಿದ್ದರು. ಸ್ವಲ್ಪ ಸಮಯದ ನಂತರ ತಂದೆಗೆ ಕರೆ ಮಾಡಿದ ಆಕೆ, ಕೆಲವು ದುಷ್ಕರ್ಮಿಗಳು ನನ್ನನ್ನು ಬೆನ್ನಟ್ಟುತ್ತಿದ್ದಾರೆ ಎಂದು ತಿಳಿಸಿದ್ದಾಳೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕೇಶಾವತ್ ಸಾಕಷ್ಟು ಹುಡುಕಿದರೂ ಮಗಳು ಮತ್ತು ಸ್ಕೂಟಿ ಪತ್ತೆಯಾಗಿಲ್ಲ. ಆಕೆಯ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು.
ಇದನ್ನೂ ಓದಿ: ತುಮಕೂರು: ಗ್ರಾಮ ಪಂಚಾಯತ್ ಸದಸ್ಯನ ಅಪಹರಣ ಪ್ರಕರಣ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಘಟನೆಯ ಬಳಿಕ ಪ್ರತಾಪನಗರ ಠಾಣೆಯಲ್ಲಿ ದೂರು ದಾಖಲಿಸಿದ ಕೇಶಾವತ್ ಕೆಲವು ಶಂಕಿತರ ಹೆಸರನ್ನು ಪೊಲೀಸರಿಗೆ ತಿಳಿಸಿದ್ದಾರೆ. ಇವರಲ್ಲಿ ಜ್ಞಾನ್ ಸಿಂಗ್, ಹರೇಂದ್ರ ಸಿಂಗ್, ಬಹದ್ದೂರ್ ಸಿಂಗ್, ಜೈ ಸಿಂಗ್, ಶಿವರಾಜ್ ಸಿಂಗ್, ದೇವೇಂದ್ರ ವಿಜೇಂದರ್ ಮತ್ತು ರಾಧಾ ಎಂಬುವರ ಹೆಸರಿದೆ. ಇದಾದ ನಂತರದ ಬೆಳವಣಿಗೆಯಲ್ಲಿ ಜೈಪುರ ವಿಮಾನ ನಿಲ್ದಾಣದ ಬಳಿ ಅಭಿಲಾಷಾ ಸ್ಕೂಟಿ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ, ನಾವು ಸ್ಥಳೀಯರನ್ನು ವಿಚಾರಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.