ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ಉಂಟಾದ ಹಿಮಕುಸಿತದಲ್ಲಿ ಖ್ಯಾತ ಪರ್ವತಾರೋಹಿ ಸವಿತಾ ಕನ್ಸವಾಲ್ ಸೇರಿದಂತೆ 7 ಮಂದಿ ಮೃತಪಟ್ಟಿದ್ದಾರೆ. ಇನ್ನೂ 25 ಜನರು ನಾಪತ್ತೆಯಾಗಿದ್ದು, 8 ಪರ್ವತಾರೋಹಿಗಳನ್ನು ರಕ್ಷಿಸಲಾಗಿದೆ.
ಉತ್ತರಕಾಶಿಯ ದ್ರೌಪದಿಯ ದಂಡ 2 ಪರ್ವತ ಶಿಖರದ ಬಳಿ ಮಂಗಳವಾರ ಹಿಮಪಾತ ಸಂಭವಿಸಿತ್ತು. ಈ ಶಿಖರದಲ್ಲಿ ಪರ್ವತಾರೋಹಿಗಳಿಗೆ ಸವಿತಾ ಬೋಧಕರಾಗಿ ಕೆಲಸ ಮಾಡುತ್ತಿದ್ದರು. ಸವಿತಾ ಅವರು ಈ ವರ್ಷದ ಮೇ ತಿಂಗಳಲ್ಲಿ ಮೌಂಟ್ ಎವರೆಸ್ಟ್ ಮತ್ತು ಮೌಂಟ್ ಮಕಾಲು ಪರ್ವತವನ್ನು 15 ದಿನಗಳಲ್ಲಿ ಯಶಸ್ವಿಯಾಗಿ ಏರುವ ಮೂಲಕ ರಾಷ್ಟ್ರೀಯ ದಾಖಲೆ ಬರೆದಿದ್ದರು. ಈಗ ಹಿಮದಿಂದಲೇ ಅವರು ಸಮಾಧಿಯಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ದೃಢಪಡಿಸಿದ್ದಾರೆ.
ಬಡತನದಲ್ಲಿ ಶಿಖರವೇರಿದ್ದ ಸವಿತಾ: ಸವಿತಾ ಅವರು ಕಡುಬಡತನದಲ್ಲಿ ಬೆಳೆದುಬಂದ ಪ್ರತಿಭೆ. ಉತ್ತರಕಾಶಿ ಜಿಲ್ಲೆಯ ಉದಯೋನ್ಮುಖ ಪರ್ವತಾರೋಹಿಯಾಗಿದ್ದರು. ಅತಿ ಕಡಿಮೆ ಅವಧಿಯಲ್ಲಿ ಪರ್ವತಾರೋಹಣ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು. ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ನಲ್ಲಿ ಬೋಧಕರಾಗಿ ಸೇರಿಕೊಂಡಿದ್ದರು.
ಹಿಮಪಾತದಲ್ಲಿ ಇನ್ನಷ್ಟು ಜನರು ಸಿಲುಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೆ 7 ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. 8 ಪರ್ವತಾರೋಹಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. 25 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಕಾರ್ಯಾಚರಣೆಗಾಗಿ ಸೇನೆಯ 2 ಚೀತಾ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಓದಿ: ಸಂಭ್ರಮದ ಬೆನ್ನಲ್ಲೇ ಸೂತಕ.. ಕುಸ್ತಿ ಗೆದ್ದ ಒಂದೇ ಗಂಟೆಯಲ್ಲಿ ಯುವ ಕುಸ್ತಿಪಟು ಸಾವು