ಅನಂತ್ನಾಗ್ (ಜಮ್ಮು ಮತ್ತು ಕಾಶ್ಮೀರ): ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಕೋಕರ್ನಾಗ್ ಪ್ರದೇಶದಲ್ಲಿ ಭಾರತೀಯ ಸೇನೆ ಹಾಗೂ ಭಯೋತ್ಪಾದಕರ ನಡುವೆ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಯೋಧರೊಬ್ಬರು ನಾಪತ್ತೆಯಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಸೇನೆ ತಿಳಿಸಿದೆ.
ಬುಧವಾರ ಸಂಜೆ ಆರಂಭವಾದ ಎನ್ಕೌಂಟರ್ ಶುಕ್ರವಾರವೂ ಮುಂದುವರಿದಿದೆ. ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಅಡಗಿರುವ ಭಯೋತ್ಪಾದಕರ ಸ್ಥಳಗಳನ್ನು ಪತ್ತೆ ಹಚ್ಚಲು ಸೇನಾ ಪಡೆಗಳು ಡ್ರೋನ್ ಕ್ಯಾಮರಾಗಳನ್ನು ಹಾಗೂ ಕ್ವಾಡ್ಕಾಪ್ಟರ್ಗಳನ್ನು ಬಳಸುತ್ತಿದೆ. ಸ್ಥಳಗಳ ಮೇಲೆ ಸೇನಾ ಪಡೆಗಳು ಮೋರ್ಟರ್ ಶೆಲ್‌ಗಳಿಂದ ದಾಳಿ ಮಾಡುತ್ತಿವೆ. ಈ ಪ್ರದೇಶಗಳಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ಮಾಹಿತಿಯ ಪ್ರಕಾರ, ಗುರುವಾರ ರಾತ್ರಿಯಿಡೀ ಎರಡೂ ಕಡೆಯಿಂದ ಗುಂಡಿನ ದಾಳಿ ನಿಂತಿತ್ತು. ಗಡೂಲ್ ಪ್ರದೇಶದಲ್ಲಿ ಶುಕ್ರವಾರ ಸೂರ್ಯೋದಯಕ್ಕೂ ಮುನ್ನವೇ ಭಯೋತ್ಪಾದಕರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಮೊರೆತ ಹಾಗೂ ಸ್ಫೋಟಗಳ ಸದ್ದು ಕೇಳಿಬಂದಿದ್ದವು.
ಅನಂತ್ನಾಗ್ ಜಿಲ್ಲೆಯ ಎತ್ತರದ ಪ್ರದೇಶದಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರನ್ನು ಸುತ್ತುವರಿಯಲಾಗಿದೆ. ಗಡೋಲ್ ಅರಣ್ಯದಲ್ಲಿ ಅಡಗಿರುವ ಭಯೋತ್ಪಾದಕರನ್ನು ಮಟ್ಟ ಹಾಕಲು ಶುಕ್ರವಾರ ಬೆಳಗ್ಗೆ ಹೆಚ್ಚುವರಿ ಪಡೆಗಳನ್ನು ಆ ಪ್ರದೇಶಕ್ಕೆ ಕಳುಹಿಸಲಾಗಿದೆ. ಹೆಲಿಕಾಪ್ಟರ್ಗಳ ಮೂಲಕ ಗಡೂಲ್ ಅರಣ್ಯಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದೆ. ಈ ಪ್ರದೇಶದಲ್ಲಿ ಸೇನೆ ಮತ್ತು ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಕೊಕೆರ್ನಾಗ್ ಪ್ರದೇಶದ ಗಡೂಲ್ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿರುವ ಭಯೋತ್ಪಾದಕರನ್ನು ಸೆರೆ ಹಿಡಿಯಲು ಸೇನೆ, ಪೊಲೀಸರು ಹಾಗೂ ಅರೆಸೇನಾ ಪಡೆ, ಸಿಆರ್ಪಿಎಫ್ ಬುಧವಾರ ಸಂಜೆ ಜಂಟಿ ಭದ್ರತಾ ಕಾರ್ಯಾಚರಣೆ ಆರಂಭಿಸಿತ್ತು.
ಗಡೂಲ್ ಸುತ್ತಮುತ್ತ ಎರಡರಿಂದ ಮೂವರು ಭಯೋತ್ಪಾದಕರು ಅಡಗಿಕೊಂಡಿದ್ದಾರೆ ಎನ್ನುವ ಸುಳಿವಿನ ಆಧಾರದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಮೂರು ದಿನಗಳಿಂದ ನಡೆಯುತ್ತಿರುವ ಭಯೋತ್ಪಾದಕರೊಂದಿಗಿನ ಭೀಕರ ಗುಂಡಿನ ಚಕಮಕಿಯಲ್ಲಿ ಕರ್ನಲ್ ಮನ್ಪ್ರೀತ್ ಸಿಂಗ್, 19 ರಾಷ್ಟ್ರೀಯ ರೈಫಲ್ಸ್ನ ಮೇಜರ್ ಆಶಿಶ್ ಧೋಂಚಕ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಳಾಖೆಯ ಡಿಎಸ್ಪಿ ಹುಮಾಯೂನ್ ಭಟ್ ಹುತಾತ್ಮರಾಗಿದ್ದಾರೆ.
ಇದನ್ನೂ ಓದಿ: ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ