ಲಕ್ನೋ (ಉತ್ತರ ಪ್ರದೇಶ): ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸೋಮವಾರ ತಡರಾತ್ರಿ ಛತ್ತೀಸ್‌ಗಢದಿಂದ ದೆಹಲಿಗೆ ಚಾರ್ಟರ್ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ಪ್ರತಿಕೂಲ ಹವಾಮಾನ ಉಂಟಾಗಿದ್ದು ವಿಮಾನ ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ.
ಸೋಮವಾರ ಸಂಜೆ ಉತ್ತರ ಪ್ರದೇಶದಲ್ಲಿ ಹಠಾತ್ ಹವಾಮಾನ ಬದಲಾವಣೆಯಿಂದ ಮೋಡ ಕವಿದ ವಾತಾವರಣ ಉಂಟಾಗಿ ಹಲವೆಡೆ ಭಾರಿ ಮಳೆಯಾಗಿದೆ. ಛತ್ತೀಸ್‌ಗಢದಿಂದ ತೆರಳುತ್ತಿದ್ದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ವಿಮಾನವು ತಡರಾತ್ರಿ ಉತ್ತರ ಪ್ರದೇಶ ತಲುಪಿದಾಗ ಪ್ರತಿಕೂಲ ಹವಾಮಾನ ಉಂಟಾಗಿದ್ದು ಪೈಲಟ್ ಚೌಧರಿ ಚರಣ್ ಸಿಂಗ್ ಲಕ್ನೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿಯನ್ನು ಸಂಪರ್ಕಿಸಿ ವಿಮಾನವನ್ನು ಇಳಿಸಲು ಅನುಮತಿ ಕೋರಿದ್ದಾರೆ. ನಂತರ ಎಟಿಸಿ ಸಿಎಂ ಪ್ರಯಾಣಿಸುತ್ತಿದ್ದ ವಿಮಾನವನ್ನು ಲಕ್ನೋ ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಮತಿಸಿದ್ದಾರೆ. ಪೈಲಟ್ ವಿಮಾನವನ್ನು ಲಖನೌ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದ್ದಾರೆ.
ಸಿಎಂ ಭೂಪೇಶ್ ಬಘೇಲ್ ಲಕ್ನೋದ ಖಾಸಗಿ ಹೋಟೆಲ್ನಲ್ಲೇ ವಿಶ್ರಾಂತಿ ಪಡೆದು ಇಂದು ಬೆಳಗ್ಗೆ 11 ಸುಮಾರಿಗೆ ಮತ್ತೊಂದು ಚಾರ್ಟರ್ ವಿಮಾನದ ಮೂಲಕ ಲಕ್ನೋದಿಂದ ದೆಹಲಿಗೆ ಪ್ರಯಾಣಿಸಿದರು. ಸೋಮವಾರ ತಡರಾತ್ರಿ 2.00 ಗಂಟೆ ಸುಮಾರಿಗೆ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಪ್ರಯಾಣಿಸುತ್ತಿದ್ದ ವಿಮಾನ ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ತುರ್ತು ಭೂಸ್ಪರ್ಶ: ದುಬೈನಿಂದ ಪಂಜಾಬ್ನ ಅಮೃತಸರ್ಗೆ ಪ್ರಯಾಣಿಸುತ್ತಿದ್ದ IX-192 ಸಂಖ್ಯೆಯ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಪ್ರಯಾಣಿಕರೊಬ್ಬರಿಗೆ ತುರ್ತು ವೈದ್ಯಕೀಯ ನೆರವಿನ ಅವಶ್ಯಕತೆ ಇದ್ದ ಕಾರಣ ಭಾರತದ ಮನವಿಗೆ ಸ್ಪಂದಿಸಿದ್ದ ಪಾಕಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರವು ಕರಾಚಿಯಲ್ಲಿ ಏರ್ ಇಂಡಿಯಾ ವಿಮಾನಕ್ಕೆ ಲ್ಯಾಂಡ್ ಮಾಡಲು ಅವಕಾಶ ನೀಡಿತ್ತು. ತುರ್ತು ಅನುಮತಿಗೆ ನೀಡಿದ್ದಲ್ಲದೇ ವಿಮಾನ ನಿಲ್ದಾಣದಲ್ಲಿ ಅಗತ್ಯ ಸೌಲಭ್ಯಗಳನ್ನೂ ಕಲ್ಪಿಸಿಕೊಟ್ಟಿತ್ತು. ಅಕ್ಟೋಬರ್ 14 ರಂದು ಘಟನೆ ನಡೆದಿತ್ತು.
"ದುಬೈ ಕಾಲಮಾನ ಪ್ರಕಾರ IX-192 ಸಂಖ್ಯೆಯ ವಿಮಾನ ಬೆಳಗ್ಗೆ 8.51ಕ್ಕೆ ಟೇಕ್ ಆಫ್ ಆಗಿತ್ತು. ನಿಗದಿಯಂತೆ ನೇರವಾಗಿ ಅಮೃತಸರಕ್ಕೆ ತೆರಳಬೇಕಿತ್ತು. ಆದರೆ, ಮಾರ್ಗಮಧ್ಯೆ ವಿಮಾನದಲ್ಲಿನ ಓರ್ವ ಪ್ರಯಾಣಿಕನ ಆರೋಗ್ಯದಲ್ಲಿ ಏರುಪೇರಾಗಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಸಿಬ್ಬಂದಿಗೆ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡುವ ಅವಶ್ಯಕತೆ ಎದುರಾಗಿತ್ತು. ತುರ್ತು ಪರಿಸ್ಥಿತಿ ಮನಗಂಡ ಪಾಕಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರ, ಭಾರತೀಯ ವಿಮಾನಗಳು ತಮ್ಮ ವಾಯುಪ್ರದೇಶ ಪ್ರವೇಶಿಸಲು ಮತ್ತು ಕರಾಚಿಯಲ್ಲಿ ಇಳಿಯಲು ಅವಕಾಶ ಮಾಡಿಕೊಟ್ಟಿತ್ತು. ವಿಮಾನವು ಮಧ್ಯಾಹ್ನ 12.30ಕ್ಕೆ ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿದಿದೆ'' ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಅಂದು ತುರ್ತು ಭೂಸ್ಪರ್ಶ ಮಾಡಿದ್ದ ಏರ್ ಇಂಡಿಯಾ ವಿಮಾನ ಇಂದು ತಾಂತ್ರಿಕ ದೋಷದ ನಿಮಿತ್ತ ರದ್ದು