ರಾಯಗಢ(ಒಡಿಶಾ): ಗರ್ಭಿಣಿಗೆ ಹೆರಿಗೆ ಮಾಡಿಸಿದ ನಂತರ ಹೊಟ್ಟೆಯೊಳಗೆ ಹತ್ತಿ ಬಿಟ್ಟು ಹೊಲಿಗೆ ಹಾಕಿದ ವಿಲಕ್ಷಣ ಘಟನೆಯೊಂದು ರಾಯಗಢ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರ ನಿರ್ಲಕ್ಷ್ಯ ಎದ್ದು ಕಾಣುತ್ತಿರುವ ಹಿನ್ನೆಲೆಯಲ್ಲಿ ಸಂತ್ರಸ್ತೆಯ ಕುಟುಂಬಸ್ಥರು ಜಿಲ್ಲಾ ಕೇಂದ್ರ ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕೊರಾಪುಟ್ ಜಿಲ್ಲೆಯ ಲಕ್ಷ್ಮೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೀರಿಗುಡಾ ಗ್ರಾಮದ ನಿವಾಸಿ ಕಾಂಚನ ಹಳಬ ಎಂಬುವರು ಸ್ತ್ರೀರೋಗ ವಿಭಾಗದಲ್ಲಿ ಹೆರಿಗೆಗಾಗಿ ರಾಯಗಢ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಜಿಲ್ಲಾಸ್ಪತ್ರೆ ವೈದ್ಯರು ಆಪರೇಷನ್ ವೇಳೆ ಮಹಿಳೆಯ ಹೊಟ್ಟೆಯೊಳಗೆ ಹತ್ತಿ ಉಂಡೆಯನ್ನ ಬಿಟ್ಟು ಹೊಲಿಗೆ ಹಾಕಿದ್ದಾರೆ. ಐದು ದಿನಗಳ ನಂತರ ಡಿಸ್ಚಾರ್ಜ್ ಆಗಿ ಮನೆಗೆ ಬಂದ ವೇಳೆ ಕಾಂಚನಾಗೆ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡಿದೆ.
ನೋವು ಕಡಿಮೆಯಾಗದ ಹಿನ್ನೆಲೆ ಕುಟುಂಬಸ್ಥರು ಮತ್ತೊಮ್ಮೆ ಆಕೆಯನ್ನ ರಾಯಗಡ ಜಿಲ್ಲಾಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ. ಈ ವೇಳೆ, ವೈದ್ಯರು ಮಹಿಳೆ ಸಂಪೂರ್ಣವಾಗಿ ಚೆನ್ನಾಗಿದ್ದಾರೆ, ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿ ಕಳುಹಿಸಿದ್ದಾರೆ. ಮನೆಗೆ ಬಂದ ಬಳಿಕ ದಿನದಿಂದ ದಿನಕ್ಕೆ ನೋವು ಹೆಚ್ಚು ಕಾಣಿಸಿಕೊಂಡ ಹಿನ್ನೆಲೆ ಆಕೆಯನ್ನ ಮತ್ತೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ವೇಳೆ, ವೈದ್ಯರು ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಿದ್ದು, ಮಹಿಳೆಯ ಹೊಟ್ಟೆಯೊಳಗೆ ಹತ್ತಿ ಪತ್ತೆಯಾಗಿದೆ. ಬಳಿಕ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ವಿಶಾಖಪಟ್ಟಣಂನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಹತ್ತಿ ಹೊರ ತೆಗಯಲಾಗಿದೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕಾಂಚನ ಅವರ ಪತಿ, ನನ್ನ ಪತ್ನಿಯ ಸಂಕಷ್ಟಕ್ಕೆ ರಾಯಗಡ ಜಿಲ್ಲಾಸ್ಪತ್ರೆಗೆ ವೈದ್ಯರೇ ಕಾರಣ. ಈ ಘಟನೆಯು ಆಕೆಗೆ ಮಾನಸಿಕ ಆಘಾತ ಮತ್ತು ನೋವನ್ನು ಉಂಟುಮಾಡಿದೆ. ನನಗೆ ಹಣಕ್ಕಿಂತ ಹೆಂಡತಿಯೇ ಮುಖ್ಯ. ಹಾಗಾಗಿ, ಶಸ್ತ್ರ ಚಿಕಿತ್ಸೆ ನಡೆಸಲು ಜಮೀನು ಮತ್ತು ಚಿನ್ನಾಭರಣಗಳನ್ನು ಅಡವಿಟ್ಟಿದ್ದೇವೆ. ಘಟನೆ ಬಗ್ಗೆ ಜಿಲ್ಲಾ ಕೇಂದ್ರ ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ರಾಯಗಡ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದೇವೆ ಎಂದಿದ್ದಾರೆ.
ಈ ಸಂಬಂಧ ಪ್ರತಿಕ್ರಿಸಿಯಿರುವ ಮುಖ್ಯ ಜಿಲ್ಲಾ ವೈದ್ಯಾಧಿಕಾರಿ (ಸಿಡಿಎಂಒ), ರಾಯಗಡ ಡಿಹೆಚ್‌ಹೆಚ್ ಲಾಲ್ಮೋಹನ್ ರೌತ್ರೇ ಅವರು ಘಟನೆಯ ಕುರಿತು ಈಗಾಗಲೇ ತನಿಖೆಗೆ ನಿರ್ದೇಶಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದನ್ನೂ ಓದಿ; ರಷ್ಯಾ ಉಕ್ರೇನ್ ನಾಗರಿಕರನ್ನು ಅಪಹರಣ ಮಾಡುತ್ತಿದೆ: ಗಂಭೀರ ಆರೋಪ ಮಾಡಿದ ಕೀವ್