ಬಂಕುರಾ(ಪಶ್ಚಿಮ ಬಂಗಾಳ): ನೀವು ಬೇಕಾದರೆ ನನ್ನ ತಲೆಯ ಮೇಲೆ ನಿಮ್ಮ ಪಾದ ಇರಿಸಿ. ಬೇಕಾದ್ರೆ ನನ್ನನ್ನ ಒದೆಯಿರಿ. ಆದರೆ, ಪಶ್ಚಿಮ ಬಂಗಾಳದ ಅಭಿವೃದ್ಧಿ ಮತ್ತು ಇಲ್ಲಿನ ಜನರ ಕನಸುಗಳನ್ನು ತುಳಿಯಲು ನಾನು ನಿಮಗೆ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆ ಭರ್ಜರಿ ಪ್ರಚಾರ ಕಾರ್ಯ ಕೈಗೊಂಡಿರುವ ಪಿಎಂ ಮೋದಿ, ಇಂದು ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು.
'ದೀದಿ ಹೋಗ್ತಾರೆ.. ಪರಿವರ್ತನೆ ಬರುತ್ತೆ': ದೀದಿ.. ನೀವು ಕಳೆದ 10 ವರ್ಷಗಳಲ್ಲಿ ಕೇವಲ ಟೊಳ್ಳು ಭರವಸೆಗಳನ್ನು ಮಾತ್ರ ನೀಡಿದ್ದೀರಿ. ಹೇಳಿಕೊಳ್ಳುವಂತಹ ಕೆಲಸ ಏನಾದ್ರೂ ಮಾಡಿದ್ದೀರಾ? 'ದೀದಿ ಹೋಗ್ತಾರೆ ಪರಿವರ್ತನೆ ಬರುತ್ತೆ' ಎಂಬುದನ್ನ ಮೇ 2ರಂದು ಬಂಗಾಳದ ಜನ ನಿರ್ಧರಿಸಿದ್ದಾರೆ ಎಂಬುದಕ್ಕೆ ಇಲ್ಲಿ ನೆರೆದಿರುವ ಬಂಕುರಾ ಜನರೇ ಸಾಕ್ಷಿಯಾಗಿದ್ದಾರೆ.
ನನ್ನ ಮುಖವನ್ನು ನೋಡಲೂ ಇಷ್ಟಪಡುವುದಿಲ್ಲ ಎಂದು ದೀದಿ ಹೇಳುತ್ತಾರೆ. ಪ್ರಜಾಪ್ರಭುತ್ವದಲ್ಲಿ ಜನರ ಸೇವೆ ಸಲ್ಲಿಸುವುದು ಮುಖ್ಯ. ಅದನ್ನು ಬಿಟ್ಟು ಮುಖ ನೋಡಿ ಏನು ಮಾಡ್ತೀರಾ ಎಂದು ಮಮತಾ ಬ್ಯಾನರ್ಜಿಗೆ ಟಾಂಗ್ ನೀಡಿದರು.
'ಇವಿಎಂ 10 ವರ್ಷ ಮಮತಾರನ್ನ ಅಧಿಕಾರದಲ್ಲಿರಿಸಿದೆ': ಭ್ರಷ್ಟಾಚಾರ ಮುಕ್ತ ರಾಜ್ಯಕ್ಕಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ. ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ಬಂಗಾಳಕ್ಕೆ ಬಿಜೆಪಿ ಸರ್ಕಾರ ಅಗತ್ಯ. ದೀದಿ ಈಗ ಇವಿಎಂ ಬಗ್ಗೆ ಅನುಮಾನಗಳನ್ನ ವ್ಯಕ್ತಪಡಿಸುತ್ತಿದ್ದಾರೆ.
ಅದೇ ಇವಿಎಂ 10 ವರ್ಷಗಳ ಕಾಲ ಅವರನ್ನು ಅಧಿಕಾರದಲ್ಲಿರಿಸಿದೆ. ಚುನಾವಣೆಯಲ್ಲಿ ಅವರು ಈಗಾಗಲೇ ತಮ್ಮ ಸೋಲನ್ನು ಒಪ್ಪಿಕೊಂಡಂತಿದೆ. ಬಂಗಾಳದ ಪ್ರತಿ ವ್ಯಕ್ತಿಯೂ ಯಾವುದೇ ಭಯವಿಲ್ಲದೆ ಮತ ಚಲಾಯಿಸಬೇಕು ಎಂದು ಪ್ರಧಾನಿ ಕರೆ ನೀಡಿದರು.