ಪಾಲ್ಘರ್ (ಮಹಾರಾಷ್ಟ್ರ): ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಎರಡು ತಿಂಗಳ ನಂತರ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಪೊಲೀಸರು ಶನಿವಾರ ಡಾ.ಅನಾಹಿತಾ ಪಾಂಡೋಲೆ ವಿರುದ್ಧ ಅಜಾಗರೂಕ ಚಾಲನೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಮೋಟಾರು ವಾಹನ ಕಾಯ್ದೆಯ ಹೊರತಾಗಿ ಭಾರತೀಯ ದಂಡ ಸಂಹಿತೆ 304 (ಎ) (ಅವಸರ ಮತ್ತು ನಿರ್ಲಕ್ಷ್ಯದ ಕೃತ್ಯದಿಂದ ಸಾವಿಗೆ ಕಾರಣವಾಗುವುದು), 279 (ಸಾರ್ವಜನಿಕ ರಸ್ತೆಯಲ್ಲಿ ದುಡುಕಿನ ಚಾಲನೆ), 337 (ಇತರರ ಜೀವ ಮತ್ತು ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡಿ ಸಾವಿಗೆ ಕಾರಣವಾಗುವುದು) ಅಡಿಯಲ್ಲಿ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಸೆಪ್ಟೆಂಬರ್ 4 ರಂದು ಪಾಲ್ಘರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿರುವ ಸೂರ್ಯ ನದಿಯ ಸೇತುವೆಯ ಮೇಲೆ ಕಾರು ಅಪಘಾತದಲ್ಲಿ ಮಿಸ್ತ್ರಿ (54) ಹಾಗೂ ಅವರ ಸ್ನೇಹಿತ ಜಹಾಂಗೀರ್ ಪಾಂಡೋಲೆ ಸಾವನ್ನಪ್ಪಿದ್ದರು. ಅವರು ಮರ್ಸಿಡಿಸ್ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಕಾರು ಚಲಾಯಿಸುತ್ತಿದ್ದ ಮುಂಬೈನ ಸ್ತ್ರೀರೋಗ ತಜ್ಞೆ ಅನಾಹಿತಾ ಪಾಂಡೋಲೆ ಹಾಗೂ ಪಕ್ಕದಲ್ಲಿ ಕುಳಿತಿದ್ದ ಪತಿ ಡೇರಿಯಸ್ ಪಾಂಡೋಲೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.
ನಂತರದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದು, ವರದಿ ಆಧಾರದಲ್ಲಿ ದುಡುಕಿನ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿರುವುದು ದೃಢಪಟ್ಟಿದೆ. ಹಾಗಾಗಿ ಡಾ ಅನಾಹಿತಾ ಪಾಂಡೋಲೆ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಅನಾಹಿತಾ ಪಾಂಡೋಲೆ ಅವರು ಚೇತರಿಸಿಕೊಳ್ಳುತ್ತಿರುವುದರಿಂದ ಅವರ ಹೇಳಿಕೆಯನ್ನು ಇನ್ನೂ ದಾಖಲಿಸಿಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವಾರ ಮುಂಬೈ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಡೇರಿಯಸ್ ಪಾಂಡೋಲ್, ಮುಂಬೈಗೆ ತೆರಳುತ್ತಿದ್ದಾಗ ಅವರ ಪತ್ನಿ ಅನಾಹಿತಾ ಅವರು ಮರ್ಸಿಡಿಸ್ ಬೆಂಜ್ ಕಾರನ್ನು ಚಲಾಯಿಸುತ್ತಿದ್ದರು. ನಮ್ಮ ಕಾರಿಗಿಂತ ಮುಂದಿದ್ದ ಕಾರು ಮೂರನೇ ಮಾರ್ಗದಿಂದ ಎರಡನೇ ಲೇನ್‌ಗೆ ಹೋಗಿದೆ. ಅದನ್ನೇ ಹಿಂಬಾಲಿಸಲು ಪ್ರಯತ್ನಿಸಿದ ಅನಾಹಿತಾ ಬಲಭಾಗದಲ್ಲಿ (ಎರಡನೇ ಲೇನ್‌ನಲ್ಲಿ) ಟ್ರಕ್ ಇದ್ದುದ್ದನ್ನು ನೋಡಿ ಕಾರನ್ನು ಇನ್ನೊಂದು ಪಕ್ಕಕ್ಕೆ ತಿರುಗಿಸಿದ್ದಾಳೆ. ಈ ವೇಳೆ ಕಾರು ಡಿವೈಡರ್ಗೆ ಗುದ್ದಿದೆ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಟಾಟಾ ಸಮೂಹದ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವು: ಈಟಿವಿ ಭಾರತ ಎಕ್ಸ್ಕ್ಲೂಸಿವ್ ವಿಡಿಯೋ