ಅಹಮದಾಬಾದ್: ಗುಜರಾತ್‌ನಲ್ಲಿ ತೌಕ್ತೆ ಚಂಡಮಾರುತವು ರಾಜ್ಯದ ಕೆಲವು ಭಾಗಗಳಿಗೆ ಅಪ್ಪಳಿಸಿ ಕರಾವಳಿಯಾದ್ಯಂತ ಭಾರಿ ಅನಾಹುತ ಸೃಷ್ಟಿಸಿದೆ. ಏಳು ಜನರು ಸಾವಿಗೀಡಾಗಿದ್ದು, ವಿದ್ಯುತ್ ಕಂಬಗಳು ಮತ್ತು ಮರಗಳು ಉರುಳಿ ಬಿದ್ದಿವೆ ಹಾಗೆ ಹಲವಾರು ಮನೆಗಳು ಮತ್ತು ರಸ್ತೆಗಳಿಗೆ ಹಾನಿಯಾಗಿದೆ.
ತೌಕ್ತೆ ಚಂಡಮಾರುತದಿಂದಾಗಿ 16,000 ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿವೆ ಮತ್ತು 40,000 ಕ್ಕೂ ಹೆಚ್ಚು ಮರಗಳು ಮತ್ತು 1,000 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ ಎಂದು ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದರು.
ಡಿಯು ಮತ್ತು ಉನಾ ನಡುವಿನ ಕರಾವಳಿಗೆ ಅಪ್ಪಳಿಸಿದ ತೀವ್ರವಾದ ತೌಕ್ತೆ ಚಂಡಮಾರುತ ಭೂಕುಸಿತ ಉಂಟುಮಾಡಿ ಕೊನೆಗೆ ಮಧ್ಯರಾತ್ರಿಯ ಹೊತ್ತಿಗೆ ಕೊನೆಗೊಂಡಿತು ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ. ಇದು ಗುಜರಾತ್ ಕರಾವಳಿಯ ಮೇಲೆ ಅತ್ಯಂತ ತೀವ್ರವಾಗಿ ದಾಳಿ ಇಟ್ಟು ಕ್ರಮೇಣ ದುರ್ಬಲಗೊಂಡಿದೆ.
ಅಮ್ರೆಲಿ ಬಳಿಯ ಸೌರಾಷ್ಟ್ರ ಪ್ರದೇಶದ ಮೇಲೆ ತೀವ್ರ ಪ್ರಭಾವ ಉಂಟು ಮಾಡುತ್ತಿದ್ದು, ಮಧ್ಯಾಹ್ನದ ಹೊತ್ತಿಗೆ ಕ್ರಮೇಣ ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಐಎಂಡಿ ತನ್ನ ಇತ್ತೀಚಿನ ಬುಲೆಟಿನ್ ನಲ್ಲಿ ತಿಳಿಸಿದೆ.
ಬೆಳಗ್ಗೆ 10.30 ಕ್ಕೆ ಐಎಂಡಿ ಬುಲೆಟಿನ್ ಪ್ರಕಾರ, ಅಮ್ರೆಲಿಯ ಪೂರ್ವ - ಈಶಾನ್ಯಕ್ಕೆ 15 ಕಿ.ಮೀ, ಸುರೇಂದ್ರನಗರದ ನೈಋತ್ಯ ದಿಕ್ಕಿನಲ್ಲಿ 125 ಕಿ.ಮೀ ಮತ್ತು ಅಹಮದಾಬಾದ್‌ನಿಂದ 205 ಕಿ.ಮೀ ನೈಋತ್ಯಕ್ಕೆ ಇರುವುದರಿಂದ ಗಾಳಿಯ ತೀವ್ರತೆಯು 105-115 ಕಿ.ಮೀ ಗೆ ಇಳಿದಿದೆ ಎಂದು ತಿಳಿಸಲಾಗಿದೆ.
ಚಂಡಮಾರುತ ಅಹಮದಾಬಾದ್ ಅನ್ನು ಅಪ್ಪಳಿಸಿದ ನಂತರ, ಮುಂಬರುವ 6-8 ಗಂಟೆಗಳು ನಿರ್ಣಾಯಕವಾಗಿರಲಿದೆ. ಆ ವೇಳೆ ತಮ್ಮ ಮನೆಗಳಿಂದ ಅನಗತ್ಯವಾಗಿ ಹೊರಬಾರದಂತೆ ಜಿಲ್ಲಾಧಿಕಾರಿ ನಾಗರಿಕರಿಗೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ರೂಪಾನಿ ಗಾಂಧಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, 16,500 ಮನೆಗಳು ಮತ್ತು 40,000 ಕ್ಕೂ ಹೆಚ್ಚು ಮರಗಳು ಮತ್ತು 1,081 ಕಂಬಗಳು ನಾಶವಾಗಿವೆ. ಇದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ. ವಿವಿಧ ಕಾರಣಗಳಿಂದಾಗಿ 159 ರಸ್ತೆಗಳು ಹಾನಿಗೀಡಾಗಿವೆ ಮತ್ತು ಕೆಲವು ರಸ್ತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದರು.
2,437 ಗ್ರಾಮಗಳಲ್ಲಿ ವಿದ್ಯುತ್ ಕಡಿತ ಉಂಟಾಗಿದ್ದು, ಈವರೆಗೆ 484 ಗ್ರಾಮಗಳಲ್ಲಿ ಮರು ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡಲಾಗಿದೆ ಎಂದರು.