ಅಲಿಗಢ (ಉತ್ತರ ಪ್ರದೇಶ): ಮೂರು ದಿನಗಳಿಂದ ಮೊಬೈಲ್ ಟವರ್‌ನಲ್ಲಿ ಸಿಲುಕಿದ್ದ ಕಾಗೆಯೊಂದನ್ನು ಬುಧವಾರ ರಕ್ಷಿಸಲಾಗಿದೆ. ಕೇಂದ್ರದ ಮಾಜಿ ಸಚಿವೆ, ಬಿಜೆಪಿ ಸಂಸದೆ ಮೇನಕಾ ಗಾಂಧಿ ಸೂಚನೆ ನಂತರ ಸಸತ ಆರು ಗಂಟೆಗಳ ಕಾರ್ಯಾಚರಣೆ ನಡೆಸಿ ಈ ಕಾಗೆಯನ್ನು ರಕ್ಷಣೆ ಮಾಡಲಾಗಿದೆ ಎಂಬುವುದೇ ಗಮರ್ನಹ!.
ಹೌದು, ಉತ್ತರ ಪ್ರದೇಶದ ಅಲಿಗಢದಲ್ಲಿ ಸುಮಾರು 35 ಅಡಿ ಎತ್ತರದ ಮೊಬೈಲ್ ಟವರ್‌ನಲ್ಲಿ ಕಾಗೆ ಸಿಲುಕಿಕೊಂಡಿತ್ತು. ಗಾಳಿಪಟದ ದಾರದಲ್ಲಿ ಕಾಗೆಯ ರೆಕ್ಕೆಗಳು ಸಿಕ್ಕಿ ಹಾಕಿಕೊಂಡಿದ್ದರಿಂದ ಹಾರಾಟ ಮಾಡಲು ಸಾಧ್ಯವಾಗದೇ ಅದು ಒದ್ದಾಡುತ್ತಿತ್ತು. ಈ ಬಗ್ಗೆ ಗೊತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸುಮ್ಮನಿದ್ದರು. ಆದರೆ, ಬಿಜೆಪಿ ಸಂಸದೆ ಮೇನಕಾ ಗಾಂಧಿ ಕರೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡು ಕಾಗೆಯನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.
ಇಲ್ಲಿನ ಕ್ವಾರ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಮೌಲಾನಾ ಆಜಾದ್ ನಗರದ ಮೊಬೈಲ್ ಟವರ್‌ನಲ್ಲಿ ಕಾಗೆ ಸಿಕ್ಕಿಹಾಕಿಕೊಂಡಿರುವ ಬಗ್ಗೆ ಮೊದಲಿಗೆ ಜೀವ್ ದಯಾ ಫೌಂಡೇಶನ್ ತಂಡಕ್ಕೆ ಮಾಹಿತಿ ಸಿಕ್ಕಿದೆ. ಅಂತೆಯೇ, ಈ ತಂಡವು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದೆ. ಆದರೆ, ಸುಮಾರು 35 ಅಡಿ ಎತ್ತರದ ಮೊಬೈಲ್ ಮೇಲ್ಭಾಗದಲ್ಲಿ ಕಾಗೆ ಸಿಲುಕಿದ್ದರಿಂದ ಅದನ್ನು ಆ ತಂಡದ ರಕ್ಷಿಸಲು ಸಾಧ್ಯವಾಗಿಲ್ಲ.
ಆದ್ದರಿಂದ ಈ ವಿಷಯವನ್ನು ಸಮೀಪದ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳ ಗಮನಕ್ಕೆ ತಂಡದ ಸದಸ್ಯರು ತಂದಿದ್ದಾರೆ. ಅಷ್ಟೇ ಅಲ್ಲ, ಮೊಬೈಲ್ ಟವರ್ ಸಂಸ್ಥೆಗೂ ತಂಡದವರು ಮಾಹಿತಿ ನೀಡಿದ್ದಾರೆ. ಆದರೆ, ಈ ಕುರಿತು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಟವರ್ ಸಂಸ್ಥೆಯವರೂ ನಿರ್ಲಕ್ಷ್ಯ ತೋರಿದ್ದಾರೆ. ಇದಾದ ನಂತರ ಮೊಬೈಲ್ ಟವರ್‌ನಲ್ಲಿ ಕಾಗೆ ಸಿಲುಕಿದ್ದ ವಿಷಯವು ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರಿಗೆ ಮುಟ್ಟಿದೆ.
ಆಗ ಮೇನಕಾ ಗಾಂಧಿ ಕಾಗೆಯನ್ನು ರಕ್ಷಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಸೂಚಿಸಿದ್ದಾರೆ. ಈ ಕರೆ ಸ್ವೀಕರಿಸುತ್ತಿದ್ದಂತೆ ಅಗ್ನಿಶಾಮಕ ದಳದವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅಷ್ಟೇ ಅಲ್ಲ, ಕೂಡಲೇ ರಕ್ಷಣಾ ಕಾರ್ಯಾಚರಣೆಯನ್ನು ಅಗ್ನಿಶಾಮಕ ಸಿಬ್ಬಂದಿ ಪ್ರಾರಂಭಿಸಿದ್ದಾರೆ. ನಿರಂತರ ಆರು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಕಾಗೆಯನ್ನು ರಕ್ಷಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಜೀವ್ ದಯಾ ಫೌಂಡೇಶನ್‌ನ ನಿರ್ದೇಶಕಿ ಆಶಾ ಸಿಸೋಡಿಯಾ, ಗಾಳಿಪಟದ ದಾರದಲ್ಲಿ ಕಾಗೆಯ ರೆಕ್ಕೆಗಳು ಸಿಕ್ಕಿಹಾಕಿಕೊಂಡಿದ್ದವು. ಇದರಿಂದ ಮೊಬೈಲ್ ಟವರ್‌ನಲ್ಲಿ ಕಾಗೆ ಸಿಲುಕಿಕೊಂಡಿತ್ತು. ಕಾಗೆಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ದಾರ ಸುತ್ತಿಕೊಂಡಿತ್ತು. ಮಾಹಿತಿ ನೀಡಿದರೂ ಮೊದಲಿಗೆ ಅಗ್ನಿಶಾಮಕ ದಳವು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ, ಸಂಸದೆ ಮೇನಕಾ ಗಾಂಧಿ ಅವರಿಂದ ಕರೆ ಬಂದ ನಂತರ ಕಾಗೆಗಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಮಳೆಯ ನಡುವೆಯೇ ಅಗ್ನಿಶಾಮಕ ದಳದವರು ಸುಮಾರು ಆರು ಗಂಟೆಗಳ ಕಾಲ ರಕ್ಷಣಾ ಕಾರ್ಯ ನಡೆಸಿದರು ಎಂದು ವಿವರಿಸಿದರು.
ಇದನ್ನೂ ಓದಿ: ಗ್ರೇಟರ್ ನೋಯ್ಡಾದ ಗ್ಯಾಲಕ್ಸಿ ಪ್ಲಾಜಾದಲ್ಲಿ ಅಗ್ನಿ ಅವಘಡ: ಕಟ್ಟಡದ ಮೂರನೇ ಅಂತಸ್ತಿನಿಂದ ಜಿಗಿದ ಇಬ್ಬರು ಸೇಫ್