ಚಂಡೀಗಢ: ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಾಕ ನಿಯಂತ್ರ ಕುರಿತು ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ವಿರುದ್ಧ ಆಮ್ ಆದ್ಮಿ ಪಕ್ಷಕ್ಕೆ ಕಾಂಗ್ರೆಸ್ ತನ್ನ ಬೆಂಬಲವನ್ನು ಘೋಷಿಸಿತ್ತು. ಈ ಬೆಳವಣಿಗೆಯ ನಂತರ ಆಮ್ ಆದ್ಮಿ ಪಾರ್ಟಿ ಬೆಂಗಳೂರಿನಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಭಾಗಹಿಸಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಎಎಪಿ ಸಂಸದ ಸಂಜಯ್ ಸಿಂಗ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದಾದ ಬಳಿಕ ಪಂಜಾಬ್ ರಾಜಕೀಯದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತವೆ.
ಕಾಂಗ್ರೆಸ್ ಬೆಂಬಲಕ್ಕೆ ಬಿಜೆಪಿ ಟೀಕೆ: ದೆಹಲಿ ಸುಗ್ರೀವಾಜ್ಞೆಗೆ ವಿರುದ್ಧವಾಗಿ ಆಮ್ ಆದ್ಮಿ ಪಕ್ಷವನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ಬಿಜೆಪಿ ನಾಯಕ ಹರ್ಜಿತ್ ಗ್ರೆವಾಲ್ ಟೀಕಿಸಿದ್ದಾರೆ. ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಬಹಳ ಹಿಂದಿನಿಂದಲೂ ಇದೆ. ಅದು ಈಗ ಬಹಿರಂಗವಾಗಿದೆ. ಬರುವ ಲೋಕಸಭೆಯಲ್ಲಿ ಎರಡು ಪಕ್ಷಗಳು ಒಟ್ಟಾಗಿ ಸ್ಫರ್ಧಿಸುತ್ತಿವೆ. ಕಾಂಗ್ರೆಸ್ ಮತ್ತು ಎಎಪಿ ಪಕ್ಷಗಳೂ ಪಿತೂರಿ ನಡೆಸುತ್ತಿವೆ. ಇದು ಪಂಜಾಬ್ ಮತ್ತು ಪ್ರಜಾಪ್ರಭುತ್ವದ ವಿರುದ್ಧದ ದೊಡ್ಡ ಪಿತೂರಿಯಾಗಿದ್ದು, ಈ ಎರಡೂ ಪಕ್ಷಗಳು ಇದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಮತ್ತು ಎಎಪಿ ನಡುವೆ ಅಪವಿತ್ರ ವಿವಾಹ: ಅಕಾಲಿದಳ ನಾಯಕ ಬಿಕ್ರಮ್ ಮಜಿಥಿಯಾ ಅವರು ಎಎಪಿ ಮತ್ತು ಕಾಂಗ್ರೆಸ್ ಮೈತ್ರಿಯನ್ನು 'ಅಪವಿತ್ರ ವಿವಾಹ' ಎಂದು ಬಣ್ಣಿಸಿದ್ದಾರೆ. ಈ ಎರಡು ಪಕ್ಷಗಳು ಪಂಜಾಬ್‌ನ ನಿಜವಾದ ಪ್ರತಿನಿಧಿಗಳು ಮತ್ತು ಖಾಲ್ಸಾ ಪಂಥ್‌ಗಳನ್ನು ರಾಜ್ಯದ ಜನರ ಸೇವೆ ಮಾಡುವ ನ್ಯಾಯಸಮ್ಮತ ಹಕ್ಕಿನಿಂದ ದೂರವಿಡುವ ಷಡ್ಯಂತ್ರದಲ್ಲಿ ಪಂಜಾಬ್ ಜನರೊಂದಿಗೆ ಆಟವಾಡುತ್ತಿವೆ. ಎರಡು ಪಂಜಾಬ್ ವಿರೋಧಿ ಮತ್ತು ಸಿಖ್ ವಿರೋಧಿ ಪಕ್ಷಗಳ ವಿಲೀನವು ಜನರಿಗೆ ಮಾಡಿದ ದೊಡ್ಡ ದ್ರೋಹ. ಕಾಂಗ್ರೆಸ್ ಮತ್ತು ಎಎಪಿ, ಅಕಾಲಿದಳದ ಮೇಲಿನ ದ್ವೇಷಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ವಿರೋಧಿಸುವ ನಾಟಕವಾಡಿದ್ದರು ಎಂದು ಮಜಿಥಿಯಾ ಟೀಕಿಸಿದ್ದಾರೆ.
ಆಮ್ ಆದ್ಮಿ ಪಕ್ಷ ವಿಶ್ವಾಸಾರ್ಹವಲ್ಲ: ಬೆಂಗಳೂರಿನಲ್ಲಿ ನಡೆಯುತ್ತಿರುವ ವಿರೋಧ ಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಒಂದೇ ವೇದಿಕೆಯಲ್ಲಿ ಕಣಿಸಿಕೊಂಡಿರುವ ಬಗ್ಗೆ ಪಂಜಾಬ್ ಬಿಜೆಪಿ ಅಧ್ಯಕ್ಷ ಸುನೀಲ್ ಜಾಖರ್ ಪ್ರತಿಕ್ರಿಯಿಸಿ, ಆಮ್ ಆದ್ಮಿ ಪಕ್ಷದ ಸರ್ಕಾರವು ನೀಡಿದ ಭರವಸೆಗಳನ್ನು ಈಡೇರಿಸುತ್ತಿಲ್ಲ. ಆಪ್ ಪಂಜಾಬ್‌ನಲ್ಲಿ ಕಾಂಗ್ರೆಸ್ ಕುರಿತ ಕರಪತ್ರಗಳನ್ನು ಹಂಚುವುದಿಲ್ಲ ಎಂಬ ಒಪ್ಪಂದವಿತ್ತು. ಆದರೆ ಈಗ ಎಲ್ಲವೂ ನಡೆಯುತ್ತಿದೆ. ಆಪ್ಗೆ ಕಾಂಗ್ರೆಸ್ಸಿಗರು ಶರಣಾಗುತ್ತಿದ್ದಾರೆ. ಆಮ್ ಆದ್ಮಿ ಪಕ್ಷ ವಿಶ್ವಾಸಾರ್ಹವಲ್ಲ ಎಂದು ಜರಿದಿದ್ದಾರೆ.
ಇದನ್ನೂ ಓದಿ:ಸೋನಿಯಾಗೆ ಇನ್ನಷ್ಟು ಹತ್ತಿರವಾದ ಮಮತಾ.. ''ಪ್ರತಿಪಕ್ಷಗಳ ಸಭೆ ಪ್ರಜಾಪ್ರಭುತ್ವಕ್ಕೆ ಉತ್ತಮ'': ಮಮತಾ ಬ್ಯಾನರ್ಜಿ
ನಮ್ಮ ಒಗ್ಗಟ್ಟು ಕಂಡು ಭಯಗೊಂಡಿದ್ದಾರೆ: ವಿಪಕ್ಷಗಳ ಸಭೆಯ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಟ್ವೀಟ್ ಮಾಡಿ, 26 ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡಲು ಮುಂದಾಗಿರುವುದು ಸಂತಸ ತಂದಿದೆ. ಅಧಿಕಾರದಲ್ಲಿರುವ ಎನ್ಡಿಎ ಭಾಗವಾಗಿರುವ ಬಿಜೆಪಿ 303 ಸ್ಥಾನಗಳನ್ನು ಗೆದ್ದಿತ್ತು. ಅದು ತನ್ನ ಮಿತ್ರಪಕ್ಷಗಳನ್ನು ಅಧಿಕಾರಕ್ಕಾಗಿ ಬಳಸಿಕೊಂಡಿತು. ಬಳಿಕ ಕೈಬಿಟ್ಟಿತ್ತು. ಈಗ ಮತ್ತೆ ಹಳೆಯ ಮಿತ್ರರನ್ನು ಸೇರಿಸಿಕೊಳ್ಳಲು ಬಿಜೆಪಿ ಅಧ್ಯಕ್ಷರು ಮತ್ತು ಅದರ ನಾಯಕರು ರಾಜ್ಯದಿಂದ ರಾಜ್ಯಕ್ಕೆ ಓಡಾಡುತ್ತಿದ್ದಾರೆ. ನಮ್ಮ ಒಗ್ಗಟ್ಟು ಕಂಡು ಅವರು ಭಯಗೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸೋಲಾಗುವ ಭೀತಿಯಲ್ಲಿದ್ದಾರೆ ಎಂದು ಹೇಳಿದ್ದರು.