ನವದೆಹಲಿ: ಮದುವೆ ಪ್ರಪೋಸಲ್ ನಿರಾಕರಿಸಿದ ಬಾಯ್ಫ್ರೆಂಡ್ ಮೇಲೆ ಯುವತಿ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಉತ್ತರಪ್ರದೇಶದ ಅಲಿಘಡ್ನ ಜೀವಂಗರ್ ಎಂಬಲ್ಲಿ ನಡೆದಿದೆ.
19 ವರ್ಷದ ಯುವತಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಆ್ಯಸಿಡ್ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಯುವಕ ಜವಾಹರ್ಲಾಲ್ ನೆಹರು ಮೆಡಿಕಲ್ ಕಾಲೇಜ್ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವೈದ್ಯರು ನೀಡಿರುವ ಮಾಹಿತಿ ಪ್ರಕಾರ ಯುವಕನ ಕಣ್ಣುಗಳು ಸಂಪೂರ್ಣವಾಗಿ ಹಾಳಾಗುವ ಸಾಧ್ಯತೆ ಇದೆಯಂತೆ.
ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ನಡುವೆ ಮನಸ್ತಾಪ ಉಂಟಾಗಿದ್ದ ಕಾರಣ ಕಳೆದ ತಿಂಗಳು ಇಬ್ಬರು ಜಗಳವಾಡಿದ್ದರು. ಇದಾದ ಬಳಿಕ ಮೇಲಿಂದ ಮೇಲೆ ಯುವತಿ ಫೋನ್ ಮಾಡಿ ತನ್ನೊಂದಿಗೆ ಮದುವೆ ಮಾಡಿಕೊಳ್ಳುವಂತೆ ಕೇಳಿಕೊಳ್ಳುತ್ತಿದ್ದಳಂತೆ. ಆದರೆ ಇದನ್ನು ನಿರಾಕರಿಸಿದ್ದ ಯುವಕ ಆಕೆಯಿಂದ ಆದಷ್ಟು ದೂರ ಉಳಿದಿಕೊಳ್ಳಲು ನಿರ್ಧರಿಸಿದ್ದ ಎಂದು ತಿಳಿದು ಬಂದಿದೆ.
ಪ್ರತಿದಿನ ಫೋನ್ ಮಾಡುತ್ತಿದ್ದ ಯುವತಿ ಆತನೊಂದಿಗೆ ಇದೇ ವಿಚಾರಕ್ಕೆ ಪೀಡಿಸುತ್ತಿದ್ದಳಂತೆ. ನಿನ್ನೆ ಕೂಡ ಫೋನ್ ಮಾಡಿದ್ದಾಳೆ. ಆದರೆ ಕಾಲ್ ರಿಸೀವ್ ಮಾಡದ ಕಾರಣಕ್ಕಾಗಿ ಆತನ ಮನೆ ಹತ್ತಿರ ಬಂದಿರುವ ಯುವತಿ, ಶಾಪ್ ಹತ್ತಿರ ನಿಂತಿದ್ದ ಯುವಕನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಮನೆಯವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಮಾತನಾಡಿರುವ ಆರೋಪಿ ಯುವತಿ, ಮೇಲಿಂದ ಮೇಲೆ ಮದುವೆ ಮಾಡಿಕೊಳ್ಳಲು ಒತ್ತಾಯ ಮಾಡುತ್ತಿದ್ದ. ನಾನು ಪ್ರಸ್ತಾಪ ತಿರಸ್ಕರಿಸಿದರೆ ಖಾಸಗಿ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಹೀಗಾಗಿ ಈ ಕೃತ್ಯವೆಸಗಿದ್ದಾಗಿ ಆರೋಪಿಸಿದ್ದಾಳೆ.