ನವದೆಹಲಿ: ಸ್ವದೇಶಿ ಆ್ಯಪ್ಗಳನ್ನು ಬಳಸಿ ಸ್ವಾವಲಂಬಿ, ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಕೈಜೋಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 68ನೇ ಆವೃತ್ತಿಯಲ್ಲಿ ಮಾತನಾಡಿದ ಮೋದಿ, ಚೀನಾದ ಅಪ್ಲಿಕೇಶನ್ಗಳನ್ನು ಬ್ಯಾನ್ ಮಾಡಿದ ಬಳಿಕ ಆರಂಭವಾದ ನಮ್ಮದೇ ಹೊಸ ಆ್ಯಪ್ಗಳಾದ ಸ್ಟೆಪ್ ಸೆಟ್ ಗೋ, ಕುಟುಕಿಕಿಡ್ಸ್, ಚಿಂಗಾರಿ ಅಪ್ಲಿಕೇಶನ್ಗಳ ಕುರಿತು ಮಾಹಿತಿ ನೀಡಿದರು.
'ಸ್ಟೆಪ್ ಸೆಟ್ ಗೋ' ಎಂಬ ಫಿಟ್‌ನೆಸ್ ಆ್ಯಪ್ ಇದೆ. ಗಣಿತ, ವಿಜ್ಞಾನದ ಹಲವು ಅಂಶಗಳನ್ನು ಹಾಡುಗಳು ಮತ್ತು ಕಥೆಗಳ ಮೂಲಕ ಸುಲಭವಾಗಿ ಕಲಿಯಲು ಮಕ್ಕಳಿಗಾಗಿ 'ಕುಟುಕಿಕಿಡ್ಸ್' ಎಂಬ ಆ್ಯಪ್ ಇದೆ. ಹಾಗೂ ಸರ್ಕಾರಿ ಯೋಜನೆಯ ಬಗ್ಗೆ ಮಾಹಿತಿ ಪಡೆಯಲು 'AskSarkar' ಎಂಬ ಆ್ಯಪ್ ಪ್ರಾರಂಭವಾಗಿದೆ. ಟಿಕ್ಟಾಕ್ಗೆ ಸೆಡ್ಡು ಹೊಡೆದು 'ಚಿಂಗಾರಿ' ಆ್ಯಪ್ ಯುವಕರಲ್ಲಿ ಜನಪ್ರಿಯವಾಗುತ್ತಿದೆ ಎಂದ ಅವರು, ಇವುಗಳ ಉಪಯುಕ್ತತೆ ಪಡೆದುಕೊಳ್ಳುವುದರೊಂದಿಗೆ 'ಆತ್ಮ ನಿರ್ಭರ ಭಾರತ ಆ್ಯಪ್ ಇನೋವೇಶನ್ ಚಾಲೆಂಜ್'ಗೆ ಒತ್ತು ನೀಡುವಂತೆ ಹೇಳಿದರು.
ಇಮಾಮ್ ಹುಸೇನ್ರ ತ್ಯಾಗ ಸ್ಮರಿಸಿದ ಮೋದಿ
ಮೊಹರಂ ಅಥವಾ ಅಶುರಾ ದಿನದ ಅಂಗವಾಗಿ ಇಮಾಮ್ ಹುಸೇನ್ ಅವರ ತ್ಯಾಗವನ್ನು ಪ್ರಧಾನಿ ಇಂದು ಸ್ಮರಿಸಿದ್ದಾರೆ. ಇಮಾಮ್ ಹುಸೇನ್ ಅವರು ಸತ್ಯ, ಸಮಾನತೆ ಮತ್ತು ನ್ಯಾಯಕ್ಕೆ ಆದ್ಯತೆ ನೀಡಿದ್ದರು. ಇವರ ಆದರ್ಶಗಳು ಅನೇಕರಿಗೆ ಶಕ್ತಿ ನೀಡುತ್ತದೆ ಎಂದರು.
ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅಲಿ ಮತ್ತು ಅವರ ಅನುಯಾಯಿಗಳು ಕ್ರಿ.ಶ. 680 ರಲ್ಲಿ ಕಾರ್ಬಾಲಾ (ಇಂದಿನ ಇರಾಕ್)ದಲ್ಲಿ ಹುತಾತ್ಮರಾಗಿದ್ದರು. ಇದರ ಸ್ಮರಣಾರ್ಥವಾಗಿ ಮೊಹರಂನ 10ನೇ ದಿನವನ್ನು ಅಶುರಾ ಎಂದು ಆಚರಿಸಲಾಗುತ್ತದೆ.
ಓಣಂ ಶುಭಾಶಯ
ಇದೇ ವೇಳೆ ಓಣಂ ಹಬ್ಬದ ಶುಭಾಶಯ ಕೋರಿದ ಮೋದಿ, ಇದು ಹಬ್ಬಗಳ ಸಮಯ. ಆದರೆ ಕೋವಿಡ್ 19 ಪರಿಸ್ಥಿತಿಯಿಂದಾಗಿ ಜನರಲ್ಲಿ ಶಿಸ್ತಿನ ಪ್ರಜ್ಞೆಯೂ ಇದೆ. ಓಣಂ ಹಬ್ಬವನ್ನು ಸಂತೋಷದಿಂದ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಆದರೆ ಈ ಬಾರಿ ಕೊರೊನಾ ನಿಯಮಗಳನ್ನು ಪಾಲಿಸಿ ಹಬ್ಬವನ್ನಾಚರಿಸಲಾಗುತ್ತಿದೆ ಎಂದರು.
ರಕ್ಷಣಾ ಕಾರ್ಯಾಚರಣೆ ವೇಳೆ ಶ್ವಾನಗಳ ಕಾರ್ಯ ಶ್ಲಾಘಿಸಿದ ಪ್ರಧಾನಿ
ವಿಪತ್ತು ನಿರ್ವಹಣೆ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಶ್ವಾನಗಳು ಪ್ರಮುಖ ಪಾತ್ರವಹಿವೆ. ಎನ್‌ಡಿಆರ್‌ಎಫ್ ತಂಡ ಇಂತಹ ಅನೇಕ ಶ್ವಾನಗಳಿಗೆ ತರಬೇತಿ ನೀಡಿದ್ದು, ಇವು ಪ್ರವಾಹ, ಕಟ್ಟಡ ಕುಸಿತದಂತಹ ಸಂದರ್ಭದಲ್ಲಿ ಅವಶೇಷಗಳಡಿ ಜೀವಂತವಾಗಿ ಸಿಲುಕಿದ್ದ ವ್ಯಕ್ತಿಗಳನ್ನು ಪತ್ತೆಹಚ್ಚುವಲ್ಲಿ ಸಹಾಯ ಮಾಡಿವೆ. ಭಾರತೀಯ ತಳಿಯ ಶ್ವಾನಗಳು ಸಮರ್ಥವಾಗಿದ್ದು, ಅವುಗಳ ಪಾಲನೆಯ ವೆಚ್ಚವೂ ಸಾಕಷ್ಟು ಕಡಿಮೆ. ನಮ್ಮ ಭದ್ರತಾ ಪಡೆಗಳು ಇವುಗಳನ್ನು ತಮ್ಮ ಶ್ವಾನಗಳ ತಂಡಗಳಲ್ಲಿ ಸೇರಿಸಿಕೊಂಡು, ತರಬೇತಿ ನೀಡಿವೆ ಎಂದು ಮಾಹಿತಿ ನೀಡಿದರು.